×
Ad

ಅಪರಾಧಿ ಸಯನೈಡ್ ಮೋಹನ್‌ಗೆ ಗಲ್ಲು ಶಿಕ್ಷೆ ಖಾಯಂ

Update: 2017-11-15 20:32 IST

ಬೆಂಗಳೂರು, ನ.15: ದಕ್ಷಿಣ ಕನ್ನಡ ಜಿಲ್ಲೆಯ ಸುನಂದಾ ಎಂಬ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿ ಸಯನೈಡ್ ಮೋಹನ್‌ ಕುಮಾರ್‌ಗೆ ಹೈಕೋರ್ಟ್ ಗಲ್ಲು ಶಿಕ್ಷೆ ಖಾಯಂಗೊಳಿಸಿ ಬುಧವಾರ ಆದೇಶಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುನಂದಾ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ 4ನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆ ಖಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿರುವ ಅರ್ಜಿ ಹಾಗೂ ಅಧೀನ ನ್ಯಾಯಾಲಯದ ಶಿಕ್ಷೆ ರದ್ದುಪಡಿಸುವಂತೆ ಕೋರಿ ಸಯನೈಡ್ ಮೋಹನ್‌ಕುಮಾರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
      
ವಿಚಾರಣೆ ವೇಳೆ ತನ್ನ ಪರವಾಗಿ ಖುದ್ದು ವಾದ ಮಂಡಿಸಿದ ಮೋಹನ್‌ ಕುಮಾರ್, ಮೃತಳು ಕೀಟನಾಶಕ ಸೇವನೆಯಿಂದ ಸಾವನ್ನಪ್ಪಿದ್ದರೂ, ಆಕೆಯ ಸಾವು ಸಯನೈಡ್‌ನಿಂದಲೇ ಸಂಭವಿಸಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ತಿರುಚುವ ಮೂಲಕ ಪೊಲೀಸರು ನನ್ನನ್ನು ಈ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೃತಳ ಮರಣೋತ್ತರ ಪರೀಕ್ಷೆ ನಡೆದು ಒಂದೂವರೆ ವರ್ಷಗಳ ಬಳಿಕ ಪೊಲೀಸರು ನಿಮ್ಮನ್ನು ಬಂಧಿಸಿದ್ದಾರೆ. ಶವಪರೀಕ್ಷೆ ನಡೆಸಿದ ವೈದ್ಯರಿಗಾಗಲೀ, ವಿಧಿ ವಿಜ್ಞಾನ ತಜ್ಞರಿಗಾಗಲೀ ನೀವೇ ಕೊಲೆ ಮಾಡಿದ್ದೀರಿ ಎಂದು ತಿಳಿದಿರಲಿಲ್ಲ. ಹೀಗಿರುವಾಗ ನಿಮ್ಮನ್ನು ಸಿಲುಕಿಸಲು ಸಯನೈಡ್ ನೀಡಿ ಕೊಲೆ ಮಾಡಲಾಗಿದೆ ಎಂದು ಮೊದಲೇ ವರದಿ ಸಿದ್ಧಪಡಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು.

ಇದಕ್ಕುತ್ತರಿಸಿದ ಮೋಹನ್, ಪೊಲೀಸರು ನನ್ನನ್ನು ಬಂಧಿಸಿದ ಬಳಿಕ ಕಂಪ್ಯೂಟರ್‌ನಲ್ಲಿದ್ದ ವಿಧಿ ವಿಜ್ಞಾನ ವರದಿಯ ಹಳೆಯ ಪ್ರತಿಯನ್ನು ತಿದ್ದಿದ್ದಾರೆ. ಈ ವರದಿಯಲ್ಲಿ ಹಿಂದಿನ ದಿನಾಂಕವನ್ನೇ ನಮೂದಿಸಿದ್ದಾರೆ ಎಂದು ಆರೋಪಿಸಿದನು.

ಆಗ ನ್ಯಾಯಪೀಠ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಪೊಲೀಸರು ತಿರುಚಿದ್ದಾರೆ ಎಂದು ನೀವು ಅನುಮಾನ ವ್ಯಕ್ತಪಡಿಸುತ್ತಿದ್ದೀರಿ. ಆದರೆ ನಿಮ್ಮ ಸಹವಾಸ ಮಾಡಿದ ಹೆಣ್ಣುಮಕ್ಕಳೆಲ್ಲ ಸಾಯುವ ಸ್ಥಿತಿಗೆ ತಲುಪಿರುವುದೇಕೆ? ಎಂಬ ಅನುಮಾನ ಸದ್ಯ ಎದುರಾಗಿದೆ ಎಂದು ನುಡಿಯಿತು.

ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ವಿಜಯ್ ಕುಮಾರ್ ಮಜಗೆ ವಾದ ಮಂಡಿಸಿ, ಮೃತಳ ಮೈಮೇಲಿದ್ದ ಚಿನ್ನಾಭರಣಗಳನ್ನು ಮೋಹನ್‌ ಕುಮಾರ್‌ನಿಂದ ವಶ ಪಡಿಸಿಕೊಳ್ಳಲಾಗಿದ್ದು, ಮೃತಳ ತಾಯಿ ಹಾಗೂ ತಂಗಿ ಅವುಗಳನ್ನು ಗುರುತಿಸಿದ್ದಾರೆ. ಸುನಂದಾಳನ್ನು ಮೋಹನ್ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದನ್ನು ಲಾಡ್ಜ್ ಮ್ಯಾನೇಜರ್ ಹಾಗೂ ರೂಂ ಬಾಯ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸಯನೈಡ್‌ನಿಂದಲೇ ಸಾವನ್ನಪ್ಪಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಬೀತಾಗಿದೆ. ಹೀಗಾಗಿ ಅಧೀನ ನ್ಯಾಯಾಲಯ ವಿಧಿಸಿರುವ ಗಲ್ಲುಶಿಕ್ಷೆ ಖಾಯಂಗೊಳಿಸಬೇಕೆಂದು ಮನವಿ ಮಾಡಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಅಪರಾಧಿ ಮೋಹನ್‌ ಕುಮಾರ್, ಮಹಿಳೆಗೆ ಸಯನೈಡ್ ನೀಡಿ ಕೊಲೆ ಮಾಡಿದ್ದಾನೆ. ಸಮಾಜಕ್ಕೆ ಈತನಿಂದ ಬೆದರಿಕೆ ಇದ್ದು, ಈತನಿಗೆ ಹೃದಯ ಹಾಗೂ ಭಾವನಾತ್ಮಕ ಬೆಲೆ ಗೊತ್ತಿಲ್ಲ ಎಂದು ಅಭಿಪ್ರಾಯಿಸಿ, ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News