ಗ್ರಾಮಗಳ ಬಡತನ ಅಳೆಯಲಿದೆ ಬ್ಯಾಂಕ್ ಖಾತೆಗಳಲ್ಲಿರುವ ಹಣ!

Update: 2017-11-17 15:38 GMT

ಹೊಸದಿಲ್ಲಿ, ನ.17: ಇನ್ನು ಮುಂದೆ ಗ್ರಾಮ ಪಂಚಾಯತ್‌ಗಳಲ್ಲಿ ‘ಆರ್ಥಿಕ ಬೆಳವಣಿಗೆ’ ಮತ್ತು ಬಡತನವನ್ನು ಅಳೆಯಲು ಅವುಗಳಲ್ಲಿ ವಾಸವಾಗಿರುವ ಕುಟುಂಬಗಳ ಬ್ಯಾಂಕ್ ಖಾತೆಗಳಲ್ಲಿರುವ ಮೊತ್ತವನ್ನು ಮಾನದಂಡವಾಗಿ ಬಳಸಲಾಗುವುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಯಾವುದೇ ಗ್ರಾಪಂ ವ್ಯಾಪ್ತಿಯಲ್ಲಿ ಜೀವಿಸುವ ಕುಟುಂಬಗಳಲ್ಲಿ ಅತೀಹೆಚ್ಚು ಕುಟುಂಬಗಳ ಬ್ಯಾಂಕ್ ಖಾತೆಯಲ್ಲಿ ರೂ. 10,000 ಹಣವಿದ್ದರೆ ಅಂಥಾ ಗ್ರಾಪಂಗಳು ಸರಕಾರದ ಬಡತನ ಸೂಚಿಯಲ್ಲಿ ಗುಣಾತ್ಮಕ ಅಂಕಗಳನ್ನು ಪಡೆಯಲಿದೆ. ವೈವಿಧ್ಯಪೂರ್ಣ ಜೀವನ ನಡೆಸುವ ಸಲುವಾಗಿ ತೆಗೆದುಕೊಳ್ಳುವ ಬ್ಯಾಂಕ್ ಸಾಲಗಳ ಮೇಲೂ ಈ ಅಂಕ ಅವಲಂಬಿತವಾಗಲಿದೆ. ಅತೀ ಹೆಚ್ಚು ಕುಟುಂಬಗಳು ಇಂಥಾ ಲೋನ್ ಪಡೆದುಕೊಂಡಿದ್ದರೆ ಬಡತನದ ಪಟ್ಟಿಯಲ್ಲಿ ಆ ಗ್ರಾಮ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಳ್ಳಲಿದೆ ಎಂದು ವರದಿ ತಿಳಿಸುತ್ತದೆ.

ಅಂತ್ಯೋದಯ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿಯನ್ನು ತಿಳಿಯುವ ಸಲುವಾಗಿ ಅಂತಿಮಗೊಳಿಸಿರುವ 21 ಮಾನದಂಡಗಳ ಪೈಕಿ ಇವುಗಳು ಸೇರಿವೆ. ಇದನ್ನು ಆಧರಿಸಿ ಅಗತ್ಯವಿರುವ ಕಡೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು.

ವೇತನ ಪಡೆಯುವ ಉದ್ಯೋಗಿಗಳಾಗಿರುವ ಮತ್ತು ಸ್ವ-ಉದ್ಯೋಗಿಗಳಾಗಿರುವ ಮಹಿಳೆಯರ ಸಂಖ್ಯೆ, ಎಲ್‌ಪಿಜಿ ಸಂಪರ್ಕ ಹೊಂದಿರುವ ಅಥವಾ ಕನಿಷ್ಟ 12 ಗಂಟೆ ವಿದ್ಯುತ್ ಸಂಪರ್ಕ ಹೊಂದಿರುವ ಮನೆಗಳ ಸಂಖ್ಯೆ, ಅಂತರ್ಜಾಲ ಸಂಪರ್ಕ ಮತ್ತು ತೆರೆದ ಶೌಚ ತಡೆ ಅಭಿಯಾನ ಮುಂತಾದವುಗಳು ಕೆಲವು ಮಾನದಂಡಗಳಾಗಿವೆ.

ಎಷ್ಟು ಕುಟುಂಬಗಳು ಹಾಲು ಮತ್ತು ಪಶು ಸಾಕಣೆಯಲ್ಲಿ ತೊಡಗಿವೆ ಮತ್ತು ಕೃಷಿಯೇತರ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಕುಶಲ ಉದ್ಯೋಗಿಗಳ ಸಂಖ್ಯೆಯೂ ಕೂಡಾ ಗ್ರಾಪಂಗಳ ಬಡತನವನ್ನು ಅಳೆಯುವ ಮಾನದಂಡಗಳಲ್ಲಿ ಸೇರಿವೆ.

50,000 ಗ್ರಾಪಂಗಳಲ್ಲಿ ಅಂತ್ಯೋದಯ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿದ್ದು ಈ ಗ್ರಾಪಂಗಳನ್ನು ಅಭಿವೃದ್ಧಿ ಕಾರ್ಯಕ್ಕಾಗಿ 5,000 ಗುಂಪುಗಳಾಗಿ ವಿಂಗಡಿಸಲಾಗುವುದು ಎಂದು ತಿಳಿಸಲಾಗಿದ್ದು ಸಚಿವಾಲಯವು ಈಗಾಗಲೇ ಈ ಯೋಜನೆಯಡಿ ಸೇರಿಸಲು ಗ್ರಾಪಂಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News