ಏಕದಿನ ಪಂದ್ಯದಲ್ಲಿ 490 ರನ್ ಗಳಿಸಿದ ದಕ್ಷಿಣ ಆಫ್ರಿಕ ದಾಂಡಿಗ!

Update: 2017-11-18 14:48 GMT

ಜೋಹಾನ್ಸ್‌ಬರ್ಗ್, ನ.18: ನಂಬಿದರೆ ನಂಬಿ,ಬಿಟ್ಟರೆ ಬಿಡಿ! ದಕ್ಷಿಣ ಆಫ್ರಿಕದ 20ರ ಹರೆಯದ ದಾಂಡಿಗ ಶೇನ್ ಡಾಡ್ಸ್‌ಮನ್ ಶನಿವಾರ ಕ್ಲಬ್ ಕ್ರಿಕೆಟ್‌ನ 50 ಓವರ್‌ಗಳ ಪಂದ್ಯದಲ್ಲಿ ವೈಯಕ್ತಿಕ ಸ್ಕೋರ್ 490 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.

ಶನಿವಾರ 20ನೆ ವರ್ಷಕ್ಕೆ ಕಾಲಿಟ್ಟಿದ್ದ ಡಾಡ್ಸ್‌ವೆಲ್ ತನ್ನ ಕ್ರಿಕೆಟ್ ಕ್ಲಬ್ ಎನ್‌ಡಬ್ಲುಯು ಪ್ಯುಕೆ ಪರ ಪೊಚ್ ಡಾರ್ಪ್ ತಂಡದ ವಿರುದ್ಧ ಈ ಸಾಧನೆ ಮಾಡಿದರು.

ಡಾಡ್ಸ್‌ವೆಲ್ 151 ಎಸೆತಗಳನ್ನು ಎದುರಿಸಿದ್ದು 57 ಸಿಕ್ಸರ್ ಹಾಗೂ 27 ಬೌಂಡರಿಗಳ ನೆರವಿನಿಂದ 490 ರನ್ ಗಳಿಸಿ ವಿಶ್ವದ ಗಮನ ತನ್ನತ್ತ ಸೆಳೆದರು. ಡಾಡ್ಸ್‌ವೆಲ್ ಸಹ ಆಟಗಾರ ರುಯಾನ್ ಹಾಸ್‌ಬ್ರೊಕ್ 54 ಎಸೆತಗಳಲ್ಲಿ ಔಟಾಗದೆ 104 ರನ್ ಗಳಿಸಿದರು.

ಡಾಡ್ಸ್‌ವೆಲ್ ಹಾಗೂ ಹಾಸ್‌ಬ್ರೊಕ್ ಸಾಹಸದ ನೆರವಿನಿಂದ ಎನ್‌ಡಬ್ಲುಯು ಪ್ಯುಕೆ ತಂಡ 50 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 677 ರನ್ ಗಳಿಸಿತು.

 63 ಸಿಕ್ಸರ್ ಹಾಗೂ 48 ಬೌಂಡರಿಯ ಮೂಲಕವೇ 570 ರನ್ ಹರಿದುಬಂತು. ಪ್ಯುಕೆ ತಂಡದ ಬ್ಯಾಟ್ಸ್‌ಮನ್‌ಗಳು ಮೊದಲ ಮೂರು ವಿಕೆಟ್‌ನಲ್ಲಿ 194, 204 ಹಾಗೂ 220 ರನ್ ಜೊತೆಯಾಟ ನಡೆಸಿದರು.

ಡಾರ್ಪ್ ತಂಡದ ನಾಲ್ವರು ಬೌಲರ್‌ಗಳು 100ಕ್ಕೂ ಅಧಿಕ ರನ್ ಬಿಟ್ಟುಕೊಟ್ಟರು. ಇತರ ಇಬ್ಬರು 90ಕ್ಕೂ ಅಧಿಕ ರನ್ ನೀಡಿದರು.

.........

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News