ವಿತ್ತ ಸಚಿವ ಇಶಾಕ್ ದಾರ್ ರಾಜೀನಾಮೆ ನಿರಾಕರಿಸಿದ ಪಿಎಂಎಲ್-ಎನ್

Update: 2017-11-18 16:49 GMT

ಇಸ್ಲಾಮಾಬಾದ್,ನ.18: ಆದಾಯ ಮೀರಿದ ಸಂಪತ್ತನ್ನು ಹೊಂದಿದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ವಿತ್ತ ಸಚಿವ ಇಶಾಕ್ ದಾರ್,  ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂಬ ದಟ್ಟವಾದ ವದಂತಿಗಳು ಶನಿವಾರ ಪಾಕ್ ರಾಜಧಾನಿಯಲ್ಲಿ ಹರಿದಾಡಿದೆಯಾದರೂ, ಆಡಳಿತಾರೂಢ ಪಿಎಂಎಲ್-ಎನ್ ಪಕ್ಷವು ಅದನ್ನು ನಿರಾಕರಿಸಿದೆ.

ತನ್ನ ವಿರುದ್ಧ ಹೊರಿಸಲಾದ ಭ್ರಷ್ಟಾಚಾರ ಆರೋಪಗಳ ವಿರುದ್ಧ ಕಾನೂನು ಸಮರ ನಡೆಸಲು ದಾರ್ ಅವರಿಗೆ ಇನ್ನೂ ಹಲವಾರು ಅವಕಾಶಗಳಿವೆ. ಅವರು ಈಗಲೂ ವಿತ್ತ ಸಚಿವರಾಗಿಯೇ ಮುಂದುವರಿದಿದ್ದಾರೆಂದು ಪಿಎಂಎಲ್-ಎನ್ ಪಕ್ಷದ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಮಾಧ್ಯಮ ವರದಿಯೊಂದು, ದಾರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ದೇಶದ ಆರ್ಥಿಕ ವ್ಯವಹಾರಗಳ ಉಸ್ತುವಾರಿಗಾಗಿ ವಿಶೇಷ ಸಮಿತಿಯೊಂದನ್ನು ರಚಿಸಲಾಗಿದೆಯೆಂದು ತಿಳಿಸಿತ್ತು.

 ಪ್ರಸ್ತುತ ದಾರ್ ಅವರು ಹೃದಯದ ಶಸ್ತ್ರಚಿಕಿತ್ಸೆಗಾಗಿ ಲಂಡನ್‌ನಲ್ಲಿದ್ದಾರೆ. ತನ್ನ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಸತತ ನಾಲ್ಕನೆ ಬಾರಿಯೂ ಹಾಜರಾಗಲು ದಾರ್ ವಿಫಲರಾದುದಕ್ಕಾಗಿ ಅವರಿಗೆ ನವೆಂಬರ್ 14ರಂದು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿತ್ತು. ಇಶಾಕ್ ದಾರ್ ಅವರು ಪಾಕಿಸ್ತಾನದ ಉಚ್ಛಾಟಿತ ಪ್ರಧಾನಿ ನವಾಜ್ ಶರೀಫ್ ಅವರ ನಿಕಟವರ್ತಿಯಾಗಿದ್ದಾರೆ.

ದಾರ್ ಅವರು ಪಾಕ್, ಯುಎಇ ಹಾಗೂ ಅಮೆರಿಕದಲ್ಲಿ ಅಪಾರ ಆಸ್ತಿಗಳನ್ನು ಹೊಂದಿದ್ದು, ಅದನ್ನವರು ತೆರಿಗೆ ಇಲಾಖೆ ಮುಂದೆ ಬಹಿರಂಗಪಡಿಸಿಲ್ಲವೆಂದು ಭ್ರಷ್ಟಾಚಾರ ನಿಗ್ರಹ ದಳ ಆಪಾದಿಸಿದೆ.

  ಪನಾಮಾ ಪೇಪರ್ಸ್ ಕುರಿತು ಜುಲೈ 28ರಂದು ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ದಾರ್ ವಿರುದ್ಧ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳವು ದಾರ್ ವಿರುದ್ಧ ಆದಾಯವನ್ನು ಮೀರಿದ ಆಸ್ತಿ ಗಳಿಕೆಯ ಆರೋಪದಲ್ಲಿ ಪ್ರಕರಣ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News