ಈ ಜಿಮ್ನಾಸ್ಟಿಕ್ 'ಏಕಲವ್ಯೆ'ಗೆ ಡಿಜಿಟಲ್ ದ್ರೋಣ!

Update: 2017-11-19 04:34 GMT

ಗುವಾಹತಿ, ನ.19: ಉಪಾಶಾ ನಿಕು ತಾಲೂಕ್‌ದಾರ್ ಎಂಬ ಹತ್ತು ವರ್ಷದ ಬಾಲೆಯ ವೀಡಿಯೊ ಯೂ ಟ್ಯೂಬ್‌ನಲ್ಲಿ ವೈರಲ್ ಆಗಿದೆ. ಕಾರಣ ಏನು ಗೊತ್ತೇ? ಈಕೆ ಭಾರತದ ಅತ್ಯಂತ ಕಿರಿಯ ಹಾಗೂ ಗಣನೀಯ ಸಾಧನೆ ಮಾಡಿದ ರಿಥಮಿಕ್ ಜಿಮ್ನಾಸ್ಟ್. ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಶಾಲಾ ಕೂಟದಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾಳೆ.

ಆದರೆ ಮಹಾಭಾರತದ ಖ್ಯಾತ ಬಿಲ್ವಿದ್ಯೆಪಟು ಏಕಲವ್ಯನಂತೆ ಉಪಾಶಾಗೆ ಗುರು ವಿದ್ಯೆ ಹೇಳಿಕೊಡುವುದಿಲ್ಲ ಎಂದು ನಿರಾಕರಿಸಿಲ್ಲ. ಏಕೆಂದರೆ ಆಕೆಗೆ ನಿಜವಾದ ಗುರು ಸಿಕ್ಕಲೇ ಇಲ್ಲ. ಇಡೀ ಈಶಾನ್ಯ ಭಾರತದಲ್ಲಿ ರಿಧಮಿಕ್ ಜಿಮ್ನಾಸ್ಟಿಕ್ ಹೇಳಿಕೊಡುವ ಯಾರೂ ಸಿಕ್ಕದ ಕಾರಣ ಆಕೆ ಸಹಜವಾಗಿಯೇ ಯೂ ಟ್ಯೂಬ್‌ನತ್ತ ಮುಖ ಮಾಡಿದ್ದಾಳೆ.

ಡ್ಯಾನ್ಸ್, ಬ್ಯಾಲೆಟ್ ಹಾಗೂ ಜಿಮ್ನಾಸ್ಟಿಕ್ ಒಳಗೊಂಡಿರುವ ಈ ಕ್ರೀಡೆಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಬಾಲೆಗೆ ಎಂಟನೇ ವಯಸ್ಸಿನಿಂದಲೇ ಒಲಿಂಪಿಯನ್ನರು "ತರಬೇತಿ" ನೀಡುತ್ತಿದ್ದಾರೆ. ಉಕ್ರೇನ್‌ನ ಅನ್ನಾ ಬೆಸ್ಸೆನೋವಾ, ಎಕತೆರಿನಾ ಸೆರೆಬ್‌ರಿಯಾನ್‌ಸ್ಕ್ಯಾ ಮತ್ತು ತಮಾರಾ ಯೆರೊಫೀವಾ, ರಷ್ಯನ್ ಪಟುಗಳಾದ ಇರಿನಾ ತಚಿನಾ, ಯೆವ್ಗೇನಿಯಾ ಕನಯೆವಾ ಹಾಗೂ ಅಲೀನಾ ಕಬೇವಾ ಅವರ ವೀಡಿಯೊಗಳನ್ನು ನೋಡಿಯೇ ಕಲಿಕೆ ಮುಂದುವರಿಸಿದಳು.

ಜಿಮ್ನಾಸ್ಟಿಕ್ಸ್‌ನಲ್ಲಿ 212 ಪದಕಗಳನ್ನು ಪಡೆದ ಈ ಆರು ಮಂದಿ ಹಾಗೂ ಇತರ ಹಲವರು ಉಪಾಶಾಳ ವರ್ಚುವಲ್ ತರಬೇತುದಾರರು.

"ಸದಾ ಈಕೆ ದೇಹವನ್ನು ಬಾಗಿಸುತ್ತಾ, ಥಳಕುತ್ತಾ ಬಳಕುತ್ತಾ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದಳು. ಒಂದು ದಿನ ಕಾಲನ್ನು ಕಿವಿಗೆ ಮುಟ್ಟಿಸುತ್ತಿರುವುದನ್ನು ನೋಡಿದೆ. ಆಗ ಕೈಗಳು ಕೂಡಾ ತಮ್ಮ ಕಾರ್ಯದಲ್ಲಿ ನಿರತವಾಗಿದ್ದವು. ಆಕೆ ಜಿಮ್ನಾಸ್ಟಿಕ್ ಅಭ್ಯಾಸ ಮಾಡುತ್ತಿದ್ದಾಳೆ ಎನ್ನುವುದು ಆಗ ತಿಳಿಯಿತು" ಎಂದು ತಂದೆ ನಿಕುಂಜಾ ತಾಲೂಕುದಾರ್ ಹೇಳುತ್ತಾರೆ. ಅವರು ನಗರದಲ್ಲಿ ಸಣ್ಣ ಫಾರ್ಮಸಿ ನಡೆಸುತ್ತಿದ್ದಾರೆ.

2015ರಲ್ಲಿ ಅವರು ಉಪಾಶಾಳನ್ನು ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಗುವಾಹತಿ ಕೇಂದ್ರದಲ್ಲಿರುವ ಜಿಮ್ನಾಸ್ಟಿಕ್ ಕೋಚ್ ಘನಜ್ಯೋತಿ ದಾಸ್ ಬಳಿಗೆ ಕರೆದೊಯ್ದರು. ಆಕೆಯ ಕೌಶಲ ಪರೀಕ್ಷಿಸಿದ ಬಳಿಕ ರಿಧಮಿಕ್ ಜಿಮ್ನಾಸ್ಟಿಕ್ಸ್‌ಗೆ ಸೂಕ್ತ ಎಂದು ಸಲಹೆ ಮಾಡಿದರು. ಆದರೆ ತಾನು ಆರ್ಟಿಸ್ಟಿಕ್ ತರಬೇತಿದಾರನಾಗಿದ್ದು, ರಿದಮಿಕ್ ವರ್ಗದಲ್ಲಿ ತರಬೇತಿ ನೀಡುವ ಕೌಶಲ ತಮಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಎಂದು ನಿಕುಂಜಾ ಹೇಳಿದ್ದಾರೆ.

"ನನಗೆ ಜಿಮ್ನಾಸ್ಟಿಕ್ ಬಗ್ಗೆ ತಿಳಿಯದು. ಆದರೆ ರಷ್ಯನ್ನರು ಉತ್ತಮ ಜಿಮ್ನಾಸ್ಟ್‌ಗಳು ಎನ್ನುವುದು ಗೊತ್ತು. ಆದ್ದರಂದ ಗೂಗಲ್‌ನಲ್ಲಿ ಹುಡುಕಿ ಹಲವು ರಿಧಮಿಕ್ ಜಿಮ್ನಾಸ್ಟಿಕ್ ವೀಡಿಯೊಗಳನ್ನು ಯೂ ಟ್ಯೂಬ್‌ ನಲ್ಲಿ ಪತ್ತೆ ಮಾಡಿದೆವು. ಇದನ್ನು ನೋಡಿ ತನ್ನ ಕೌಶಲ ಬೆಳೆಸಿಕೊಂಡಳು. ಮೂಲ ತರಬೇತಿ ಬಳಿಕ 10 ದಿನಗಳ ತರಬೇತಿಗೆ ಪಂಜಾಬ್‌ಗೆ ಕರೆದೊಯ್ದೆ. ಆದರೆ ಯೂರೋಪಿಯನ್ ದಂತಕಥೆಗಳೆನಿಸಿದ ಜಿಮ್ನಾಸ್ಟ್‌ಗಳ ವೀಡಿಯೊ ಅವಳಿಗೆ ಹೆಚ್ಚು ಪ್ರಯೋಜನಕಾರಿ" ಎಂದು ವಿವರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News