ಜನಪದ ಮಹಾಕಾವ್ಯ ದೇಶದ ಮೂಲ ಪರಂಪರೆ: ಡಿಸಿಪಿ ಸಿದ್ಧರಾಜು

Update: 2017-11-19 13:25 GMT

ಬೆಂಗಳೂರು, ನ.19: ಜನಪದ ಮಹಾಕಾವ್ಯಗಳು ನಮ್ಮ ಪರಂಪರೆಯಾಗಿದ್ದು, ಪರಿಸರ ಹಾಗೂ ಜೀವಪರ ಆಶಯಗಳನ್ನು ಹೊಂದಿವೆ. ಈ ಪರಂಪರೆಯನ್ನು ಜೀವಂತವಾಗಿಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಉಪ ಪೊಲೀಸ್ ಆಯುಕ್ತ ಸಿದ್ಧರಾಜು ತಿಳಿಸಿದರು.

ರವಿವಾರ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನಗರದ ಕನ್ನಡ ಸಾಹಿತ್ಯ ಪರಿಷತ್‌ನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಕವಿ ಕೆ.ಎಂ.ಶೈಲೇಶ್‌ರವರ ‘ಧರೆಗೆ ದೊಡ್ಡವರು’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಪದ ಪರಂಪರೆಯ ಮೂಲ ಸಾರವನ್ನು ನಮ್ಮ ಮನಸುಗಳಲ್ಲಿ ಹಾಸುಹೊಕ್ಕಾಸಿಕೊಂಡಾಗ ಮಾತ್ರ ನಮ್ಮ ನೆಲದ ಕುರಿತು ಪ್ರೀತಿ, ಅಭಿಮಾನ ಹುಟ್ಟಲು ಸಾಧ್ಯವೆಂದು ತಿಳಿಸಿದರು.

ಇವತ್ತಿನ ಆಧುನಿಕ ಜೀವನದಲ್ಲಿ ಯುವ ಜನತೆಯನ್ನು ದಾರಿ ತಪ್ಪಿಸುವಂತಹ ಅಂಶಗಳೇ ಹೆಚ್ಚಿವೆ. ಇಂತಹ ಸಂದಭರ್ದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಸಂಘ, ಸಂಸ್ಥೆಗಳು ನಮ್ಮ ಜನಪದ ಸಂಸ್ಕೃತಿಯನ್ನು ಯುವ ತಲೆಮಾರಿಗೆ ತಲುಪಿಸುವಂತಹ ಕೆಲಸವಾಗಬೇಕು ಎಂದು ಅವರು ಹೇಳಿದರು.

ವೇಗದ ಜೀವನಕ್ಕೆ ಸಿಲುಕಿರುವ ನಾವು ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಸುತ್ತಮುತ್ತಲು ನಡೆಯುವ ಪ್ರತಿಯೊಂದು ಘಟನೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೇವೆ. ಇದರಿಂದ ಮನುಷ್ಯ ಸಂಬಂಧಗಳು ಹಾಳಾಗುತ್ತಿವೆ. ಹೀಗಾಗಿ ಪರಿಸ್ಥಿತಿಯ ಕಾರಣಕ್ಕಾಗಿ ಕೆಲವರು ತಪ್ಪು ದಾರಿಗೆ ಹೋಗಬಹುದು. ಅದನ್ನೇ ದೊಡ್ಡದು ಮಾಡುವುದರಲ್ಲಿ ಯಾವುದೇ ವಿಶೇಷತೆಯಿಲ್ಲ. ಅಂತಹವರನ್ನು ಕ್ಷಮಿಸಿ ಸರಿದಾರಿಗೆ ಕರೆದೊಯ್ಯುವಂತಹ ಕೆಲಸ ಮಾಡಬೇಕಾಗಿದೆ ಎಂದು ಅವರು ಆಶಿಸಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಇತ್ತೀಚಿಗೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜಾತಿ, ಧರ್ಮ, ಭಾಷೆಗಳ ಮಧ್ಯೆ ದ್ವೇಷ ಬಿತ್ತುವಂತಹ ಕೆಲಸದಲ್ಲಿ ನಿರತರಾಗಿದ್ದಾರೆ. ಇಂತಹ ವಿಚಾರಗಳಿಗೆ ಜನತೆ ಆಸಕ್ತಿ ತೋರದಂತೆ ಮಾಡಲು ಸಾಹಿತ್ಯ-ಸಂಸ್ಕೃತಿಯಿಂದ ಮಾತ್ರ ಸಾಧ್ಯವಾಗಿದೆ. ಹೀಗಾಗಿ ನಾಡಿನ ಎಲ್ಲ ಮನಸುಗಳಲ್ಲಿ ಸಾಹಿತ್ಯ ವಿಚಾರಗಳು ಮೊಳಕೆಯೊಡೆಯಬೇಕು ಎಂದು ಆಶಿಸಿದರು.

ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷ ಎಸ್.ರಾಮಲಿಂಗೇಶ್ವರ ಮಾತನಾಡಿ, ಕಳೆದ 20ವರ್ಷಗಳಿಂದ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಯುವ ಜನತೆಯನ್ನು ಕೇಂದ್ರವಾಗಿಸಿಕೊಂಡು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಯುವ ಜನತೆ ಎಚ್ಚೆತ್ತರೆ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವೆಂದು ನಂಬಿಕೊಂಡು ಟ್ರಸ್ಟನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಎ.ಆರ್.ರಘರಾಂ ‘ಧರೆಗೆ ದೊಡ್ಡವರು’ ಕೃತಿಯ ಕುರಿತು ಮಾತನಾಡಿದರು. ಈ ವೇಳೆ ಡಾ.ಸಿ.ಕೆ.ಮೂರ್ತಿ, ಬಸವ ವೇದಿಕೆಯ ನಾ.ಮಲ್ಲಿಕಾರ್ಜುನ, ಕೃತಿಕಾರ ಕೆ.ಎಂ.ಶೈಲೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News