ಐಸಿಜೆ ನ್ಯಾಯಮೂರ್ತಿಯಾಗಿ ದಲ್ವೀರ್ ಭಂಡಾರಿ ಮರು ಆಯ್ಕೆ

Update: 2017-11-21 04:01 GMT

ವಿಶ್ವಸಂಸ್ಥೆ, ನ. 21: ಇಂಟರ್‌ನ್ಯಾಷನಲ್ ಕೋಟ್ ಆಫ್ ಜೆಸ್ಟಿಸ್ (ಐಸಿಜೆ) ನ್ಯಾಯಮೂರ್ತಿಯಾಗಿ ಭಾರತದ ಅಭ್ಯರ್ಥಿ ದಲ್ವೀರ್ ಭಂಡಾರಿ ಆಯ್ಕೆಯಾಗಿದ್ದಾರೆ. ಕೊನೆಕ್ಷಣದಲ್ಲಿ ಬ್ರಿಟನ್ ತಮ್ಮ ಉಮೇದುವಾರಿಕೆ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಭಂಡಾರಿ ಆಯ್ಕೆ ಹಾದಿ ಸುಗಮವಾಯಿತು.

ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪ್ರತ್ಯೇಕ ಹಾಗೂ ಏಕಕಾಲಕ್ಕೆ ನಡೆದ ಚುನಾವಣೆಯಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಂಡಾರಿ 183-193 ಮತಗಳನ್ನು ಪಡೆದಿದ್ದು, ಭದ್ರತಾ ಮಂಡಳಿಯಲ್ಲಿ ಎಲ್ಲ 15 ಮತಗಳನ್ನು ಗಳಿಸಿದರು.

ನಾಟಕೀಯ ಬೆಳವಣಿಗೆಯಲ್ಲಿ ಹೇಗ್ ಮೂಲದ ಅಂತಾರಾಷ್ಟ್ರೀಯ ನ್ಯಾಯಾಲಯದ ಈ ಪ್ರತಿಷ್ಠಿತ ಹುದ್ದೆಗೆ ಬ್ರಿಟನ್ ತನ್ನ ಉಮೇದುವಾರಿಕೆ ವಾಪಾಸು ಪಡೆದ ಹಿನ್ನೆಲೆಯಲ್ಲಿ ಭಂಡಾರಿ ಸುಲಭವಾಗಿ ಮರು ಆಯ್ಕೆಯಾದರು. ಬ್ರಿಟನ್‌ನ ಕ್ರಿಸ್ತೋಫರ್ ಗ್ರೀನ್‌ವುಡ್, ಮರು ಆಯ್ಕೆಗೆ ನಿಟಕ ಸ್ಪರ್ಧೆ ನೀಡುವ ಸಾಧ್ಯತೆ ಇತ್ತು. ಭದ್ರತಾ ಮಂಡಳಿಯ 15 ಸದಸ್ಯ ದೇಶಗಳ ಪೈಕಿ ಅಮೆರಿಕ, ರಷ್ಯಾ, ಫ್ರಾನ್ಸ್ ಹಾಗೂ ಚೀನಾ ಗ್ರೀನ್‌ವುಡ್ ಬೆಂಬಲಕ್ಕಿದ್ದವು ಎಂದು ತಿಳಿದುಬಂದಿದೆ. ಬ್ರಿಟನ್ ಭದ್ರತಾ ಮಂಡಳಿಯ ಐದನೇ ಕಾಯಂ ಸದಸ್ಯ ದೇಶವಾಗಿದೆ.

ನಾಟಕೀಯ ಬೆಳವಣಿಗೆಯೊಂದರಲ್ಲಿ, ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿ ಮ್ಯಾಥ್ಯೂ ರೈಕ್ರಾಫ್ಟ್ ಅವರು ವಿಶ್ವಸಂಸ್ಥೆ ಸಾಮಾನ್ಯಸಭೆ ಹಾಗೂ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದು, ಕಣದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದರು. 12ನೆ ಸುತ್ತಿನ ಮತದಾನಕ್ಕಾಗಿ ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿತ್ತು. ಇದಕ್ಕಿಂತ ಸ್ವಲ್ಪ ಮೊದಲು ಬ್ರಿಟನ್ ನಾಮಪತ್ರ ವಾಪಾಸು ಪಡೆಯಿತು.

15 ಸದಸ್ಯರ ಅಂತಾರಾಷ್ಟ್ರೀಯ ನ್ಯಾಯಾಲಯದ ಈ ಪ್ರತಿಷ್ಠಿತ ಹುದ್ದೆಗೆ ಒಂಬತ್ತು ವರ್ಷ ಅವಧಿಯ ಮರು ಆಯ್ಕೆಗೆ ಇಬ್ಬರ ನಡುವೆ ತುರುಸಿನ ಸ್ಪರ್ಧೆ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News