ಭಾರತದ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಶಂಕರ್ ಆಯ್ಕೆ

Update: 2017-11-22 04:41 GMT

ಚೆನ್ನೈ, ನ.21: ತಮಿಳುನಾಡಿನ ರಣಜಿ ತಂಡದ ನಾಯಕ ವಿಜಯ್ ಶಂಕರ್ ಶ್ರೀಲಂಕಾ ವಿರುದ್ಧ ಎರಡನೆ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಭುವನೇಶ್ವರ ಕುಮಾರ್ ಹಾಗೂ ಶಿಖರ್ ಧವನ್‌ರನ್ನು ವೈಯಕ್ತಿಕ ಕಾರಣಕ್ಕೆ ತಂಡದಿಂದ ಬಿಡುಗಡೆಗೊಳಿಸಲಾಗಿದೆ.

 ‘‘ಕುಮಾರ್ ಟೆಸ್ಟ್ ಸರಣಿಯ ಉಳಿದೆರಡು ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಧವನ್ ಮೂರನೆ ಪಂದ್ಯಕ್ಕೆ ಲಭ್ಯವಿರುತ್ತಾರೆ’’ಎಂದು ಬಿಸಿಸಿಐನ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ.

ಭುವನೇಶ್ವರ್ ನ.23 ರಂದು ನಾಗ್ಪುರದಲ್ಲಿ ಗೆಳತಿ ನೂಪರ್ ನಗರ್‌ರನ್ನು ವಿವಾಹವಾಗುತ್ತಿದ್ದಾರೆ. ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭುವನೇಶ್ವರ್ ಹಾಗೂ ಧವನ್ ಉತ್ತಮ ಪ್ರದರ್ಶನ ನೀಡಿದ್ದು, ರೋಚಕ ಡ್ರಾ ಸಾಧಿಸಲು ನೆರವಾಗಿದ್ದರು. ಧವನ್ 2ನೆ ಇನಿಂಗ್ಸ್‌ನಲ್ಲಿ 94 ರನ್ ಗಳಿಸಿದ್ದರೆ, ಭುವನೇಶ್ವರ್ 96 ರನ್‌ಗೆ 6 ವಿಕೆಟ್ ಪಡೆದಿದ್ದರು.

ಆಲ್‌ರೌಂಡರ್ ಶಂಕರ್ ವೇಗದ ಬೌಲರ್ ಭುವನೇಶ್ವರ ಕುಮಾರ್ ಬದಲಿಗೆ ಭಾರತ ತಂಡದಲ್ಲಿ ಇದೇ ಮೊದಲ ಬಾರಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮುರಳಿ ವಿಜಯ್ ಮೀಸಲು ಆರಂಭಿಕ ಆಟಗಾರನಾಗಿದ್ದು, ಇಶಾಂತ್ ಶರ್ಮ ಮೂರನೆ ವೇಗದ ಬೌಲರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಂಕರ್‌ಗೆ 2ನೇ ಟೆಸ್ಟ್‌ನಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿಲ್ಲ.

 ‘‘ಭಾರತ ತಂಡದಲ್ಲಿ ನನಗೆ ಅವಕಾಶ ನೀಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕೆನ್ನುವುದು ನನ್ನ ದೀರ್ಘಕಾಲ ಕನಸಾಗಿತ್ತು. ಇದೀಗ ಆ ಕನಸು ಈಡೇರಿದೆ. ನನ್ನ ಕಠಿಣ ಶ್ರಮಕ್ಕೆ ಫಲ ಲಭಿಸಿದೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ’’ ಎಂದು ಶಂಕರ್ ಹೇಳಿದ್ದಾರೆ.

26ರ ಹರೆಯದ ಕ್ರಿಕೆಟಿಗ ಶಂಕರ್ ಭಾರತ ‘ಎ’ ತಂಡದಲ್ಲಿ ಕೆಲವು ಸಮಯ ಆಡಿದ್ದು ಆಲ್‌ರೌಂಡ್ ಪ್ರದರ್ಶನ ಮೂಲಕ ಗಮನಸೆಳೆಯುತ್ತಿದ್ದಾರೆ. ಹಾರ್ದಿಕ್ ಪಟೇಲ್‌ರಂತೆಯೇ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿದ್ದಾರೆ.

32 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಶಂಕರ್ 1,671 ರನ್ ಹಾಗೂ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

‘‘ಭಾರತ ‘ಎ’ ತಂಡದಲ್ಲಿ ಆಡಿದ್ದರಿಂದಲೇ ನಾನು ಆಲ್‌ರೌಂಡರ್ ಆಗಿ ಬೆಳೆಯುವಂತಾಯಿತು. ಬೇರೆ ಬೇರೆ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕೆಂದು ನನಗೆ ತಿಳಿದಿದೆ. ನನ್ನ ಬ್ಯಾಟಿಂಗ್ ಫಾರ್ಮ್ ಬಗ್ಗೆ ನನಗೆ ತೃಪ್ತಿಯಿದೆ. ಮುಂಬೈ ವಿರುದ್ಧ ರಣಜಿಯಲ್ಲಿ 4 ವಿಕೆಟ್‌ಗಳನ್ನು ಉರುಳಿಸಿದ ಬಳಿಕ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ’’ ಎಂದು ಶಂಕರ್ ಹೇಳಿದ್ದಾರೆ.

ಈಗ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಶಂಕರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಒಡಿಶಾ ವಿರುದ್ಧ ಶತಕ ಸಿಡಿಸಿದ್ದ ಶಂಕರ್ ಬೌಲಿಂಗ್‌ನಲ್ಲೂ ಮಿಂಚಿದ್ದರು.

ಶಂಕರ್ ಕಳೆದ ಋತುವಿನಲ್ಲಿ ತಮಿಳುನಾಡು ತಂಡದ ನಾಯಕನಾಗಿ ದೇವಧರ್ ಟ್ರೋಫಿ ಹಾಗೂ ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಜಯಿಸಲು ನೆರವಾಗಿದ್ದರು. ಭಾರತ-ಶ್ರೀಲಂಕಾ ನಡುವಿನ 2ನೆ ಟೆಸ್ಟ್ ಪಂದ್ಯದಲ್ಲಿ ನಾಗ್ಪುರದಲ್ಲಿ ನ.24 ರಿಂದ ಆರಂಭವಾಗಲಿದೆ.

ಭಾರತದ ಟೆಸ್ಟ್ ತಂಡ

ವಿರಾಟ್ ಕೊಹ್ಲಿ(ನಾಯಕ), ಕೆ.ಎಲ್,ರಾಹುಲ್, ಎಂ.ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ(ಉಪನಾಯಕ), ರೋಹಿತ್ ಶರ್ಮ, ವೃದ್ಧಿಮಾನ್ ಸಹಾ(ವಿಕೆಟ್‌ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಕುಲ್‌ದೀಪ್ ಯಾದವ್, ಮುಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ ಹಾಗೂ ವಿಜಯ್ ಶಂಕರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News