ಅಸಂಘಟಿತರಿಗಾಗಿ ಅಂಬೇಡ್ಕರ್ ಕಾರ್ಮಿಕ ಹಸ್ತ ಯೋಜನೆ ಜಾರಿ: ಸಂತೋಷ್ ಲಾಡ್

Update: 2017-11-22 18:32 GMT

 ಬೆಳಗಾವಿ(ಸುವರ್ಣ ವಿಧಾನಸೌಧ), ನ.22; ಅಸಂಘಟಿತ ವಲಯದ ಆರು ವರ್ಗಗಳ ಅಪಘಾತ ಪರಿಹಾರ ಮತ್ತು ಭವಿಷ್ಯನಿಧಿ ಒದಗಿಸುವ ಸಲುವಾಗಿ ಅಂಬೇಡ್ಕರ್ ಕಾರ್ಮಿಕ ಹಸ್ತ ಎಂಬ ಹೊಸ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಬುಧವಾರ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಆರ್.ಧರ್ಮಸೇನಾ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಅಸಂಘಟಿತ ವಲಯದಲ್ಲಿ ಗುರ್ತಿಸಲ್ಪಟ್ಟ ಆರು ವರ್ಗಗಳಾದ ಹಮಾಲರು, ಬೀದಿಬದಿ ವ್ಯಾಪಾರಿಗಳು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್‌ಗಳು ಹಾಗೂ ಮೆಕ್ಯಾನಿಕ್‌ಗಳಿಗೆ ಸ್ಮಾರ್ಟ್‌ಕಾರ್ಡ್ ನೀಡುವ ಮೂಲಕ ಅಪಘಾತ ಪರಿಹಾರ ಹಾಗೂ ಭವಿಷ್ಯನಿಧಿ ಪಿಂಚಣಿ ಸೌಲಭ್ಯ ಒದಗಿಸುವ ಅಂಬೇಡ್ಕರ್ ಕಾರ್ಮಿಕ ಹಸ್ತ ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಖಾಸಗಿ ವಾಹನ ಚಾಲಕರಿಗಾಗಿ ಅಪಘಾತ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದೀಗ ಈ ಯೋಜನೆಯನ್ನು ಪರಿಷ್ಕರಿಸಿ ಚಾಲಕರು, ನಿರ್ವಾಹಕ ಹಾಗೂ ಕ್ಲೀನರ್‌ಗಳಿಗೂ ಅಪಘಾತ ವಿಮಾ ಸೌಲಭ್ಯ ಒದಗಿಸುವ ದೃಷ್ಟಿಯಿಂದ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಎಂದು ಪರಿಷ್ಕರಿಸಿ ಜಾರಿಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿದ್ದು ಇವರಿಗಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲಾಗಿದೆ. ಈ ಮೂಲಕ ಕಟ್ಟಡ ಕಾಮಗಾರಿಗಳಲ್ಲಿ ಮಂಡಳಿಯು ಸಂಗ್ರಹಿಸುವ ಶೇ.1ರಷ್ಟು ಸುಂಕದಲ್ಲಿ ನಿರ್ಮಾಣ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 2007ರಿಂದ 2017ರ ಅಕ್ಟೋಬರ್‌ವರೆಗೆ 2,35,035 ಫಲಾನುಭವಿಗಳಿಗೆ 223.65 ಕೋಟಿ ರೂ.ಮೊತ್ತವನ್ನು ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದು ಸಂತೋಷ್‌ಲಾಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News