ಕ್ಯಾನ್ಸರ್ ದೈವಿಕ ನ್ಯಾಯದ ಫಲ ಎಂದ ಅಸ್ಸಾಂ ಆರೋಗ್ಯ ಸಚಿವ !

Update: 2017-11-23 03:49 GMT

ಗುವಾಹತಿ, ನ.23: ಕ್ಯಾನ್ಸರ್‌ನಂಥ ಮಾರಕ ರೋಗಗಳಿಂದ ಬಳಲುವ ಜನರು ಹಿಂದೆ ಮಾಡಿದ ಪಾಪಕ್ಕೆ ಪ್ರತಿಫಲದ ರೂಪದಲ್ಲಿ ಈ ರೋಗವನ್ನು ಅನುಭವಿಸುತ್ತಾರೆ. ಇದು ದೈವಿಕ ನ್ಯಾಯ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಾಂತ ಬಿಸ್ವ ಶರ್ಮಾ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.

ಸಚಿವರ ಈ ಹೇಳಿಕೆಗೆ ರಾಜಕೀಯ ವಲಯ ಮತ್ತು ಕ್ಯಾನ್ಸರ್ ರೋಗಿಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

"ನಾವು ಮಾಡಿದ ಪಾಪಕ್ಕೆ ದೇವರು ನಮ್ಮನ್ನು ನರಳುವಂತೆ ಮಾಡುತ್ತಾನೆ. ಕೆಲವೊಮ್ಮೆ ಯುವಕರು ಕ್ಯಾನ್ಸರ್‌ನಿಂದ ಸಾಯುವುದು ಅಥವಾ ಅಪಘಾತಗಳಿಂದ ಸಾಯುವುದನ್ನು ನೋಡುತ್ತೇವೆ. ಇದರ ಹಿನ್ನೆಲೆಯನ್ನು ನೋಡಿದರೆ ನಿಮಗೆ ದೈವಿಕ ನ್ಯಾಯ ಅರಿವಿಗೆ ಬರುತ್ತದೆಯೇ ವಿನಃ ಮತ್ತೇನೂ ಅಲ್ಲ. ದೈವಿಕ ನ್ಯಾಯಕ್ಕೆ ಅನುಗುಣವಾಗಿ ನಾವು ಅನುಭವಿಸಲೇಬೇಕು" ಎಂದು ಶರ್ಮಾ ಸಮಾರಂಭವೊಂದರಲ್ಲಿ ಹೇಳಿಕೆ ನೀಡಿದ್ದರು.

"ನಮ್ಮ ಜೀವನದಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಅಂಥ ಪಾಪ ಮಾಡಿರಬಹುದು. ಇಲ್ಲವೇ ನಮ್ಮ ತಂದೆ-ತಾಯಿ ಅದನ್ನು ಮಾಡಿರಬಹುದು. ಈ ಬಗ್ಗೆ ಭಗವದ್ಗೀತೆ, ಬೈಬಲ್‌ಗಳಲ್ಲೂ ಉಲ್ಲೇಖವಿದೆ. ಇದರಿಂದ ಯಾರೂ ತಪ್ಪಿಸಿಕೊಳ್ಳಲಾಗದು" ಎಂದು ಸಚಿವರು ಅಭಿಪ್ರಾಯಪಟ್ಟಿದ್ದರು.

ಸಚಿವರ ಹೇಳಿಕೆ ದುರದೃಷ್ಟಕರ. ಇದು ಕ್ಯಾನ್ಸರ್ ರೋಗಿಗಳ ಭಾವನೆಗಳಿಗೆ ನೋವು ತರುವಂಥದ್ದು ಎಂದು ಕಾಂಗ್ರೆಸ್ ಮುಖಂಡ ದೇವವ್ರತ ಸೈಕಿಯಾ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಕ್ಯಾನ್ಸರ್ ಹರಡುತ್ತಿರುವುದು ತಡೆಯುವಲ್ಲಿ ಸರ್ಕಾರದ ವೈಫಲ್ಯಕ್ಕೆ ಇದು ಕನ್ನಡಿ ಎಂದು ಎಐಯುಡಿಎಫ್ ಮುಖಂಡ ಅಮಿನುಲ್ ಇಸ್ಲಾಂ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News