ಸಂಸದ ಪ್ರತಾಪ್ ಸಿಂಹಗೆ ಲೀಗಲ್ ನೋಟಿಸ್: ಪ್ರಕಾಶ್ ರೈ

Update: 2017-11-23 12:06 GMT

ಬೆಂಗಳೂರು, ನ.23: ನನ್ನ ವೈಯಕ್ತಿಕ ಜೀವನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಟ್ರೋಲ್ ಮಾಡಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಲೀಗಲ್ ನೋಟಿಸ್ ನೀಡಿದ್ದು, ಇದಕ್ಕೆ ಅವರು ಸಮರ್ಪಕವಾದ ಉತ್ತರ ನೀಡಬೇಕು. ಇಲ್ಲದಿದ್ದರೆ, ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಬಹುಭಾಷಾ ನಟ ಪ್ರಕಾಶ್ ರೈ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಗನ ಸಾವಿನ ದುಃಖದಲ್ಲಿ ಡ್ಯಾನ್ಸರ್ ಹಿಂದೆ ಓಡಿ ಹೋಗಿದ್ದಾನೆ ಎಂದು ಟೀಕಿಸುತ್ತಾರೆ, ಪುತ್ರ ಶೋಕ ಏನೆಂದು ನಿಮಗೆ ಗೊತ್ತಿಲ್ಲ ಪ್ರತಾಪ್ ಸಿಂಹ ಅವರೇ ಎಂದು ತಿರುಗೇಟು ನೀಡಿದರು.

ಗೌರಿ ಲಂಕೇಶ್ ಹತ್ಯೆಯಾದ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದಾಗ ಯಾವ ಮಹಿಳೆಯ ಪಕ್ಕದಲ್ಲಿ ಮಲಗಿದ್ದೆ. ಈಗ ಎದ್ದು ಬಂದಿದೀಯಾ ಎಂದೆಲ್ಲ ಅಸಹ್ಯವಾಗಿ ಟೀಕಿಸುವುದು ಪ್ರತಾಪ್ ಸಿಂಹ ಅವರ ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವ ದೇಶದಲ್ಲಿ ಸಾಮಾನ್ಯರಿಗೂ ಪ್ರಶ್ನಿಸುವ ಹಕ್ಕಿದೆ. ಹೀಗಾಗಿ ನಾನು ನಿಮ್ಮ ನಾಯಕ ಮೋದಿಯನ್ನು ಪ್ರಶ್ನೆ ಮಾಡಲಿಲ್ಲ. ದೇಶದ ಪ್ರಧಾನಿಯನ್ನು ಪ್ರಶ್ನಿಸಿದ್ದೇನೆ. ಆದರೆ, ಇಷ್ಟಕ್ಕೆ ನನ್ನ ತಾಯಿಯ ಧರ್ಮದ ಬಗ್ಗೆ ಮಾತನಾಡುತ್ತಾರೆ. ನಾನು ಯಾವುದಾದರು ಪ್ರಶ್ನೆ ಕೇಳಿದರೆ ವೈಯಕ್ತಿಕವಾಗಿ ನಿಂದನೆ ಶುರು ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮೋದಿ ವಿರುದ್ಧ ಕೈ ಎತ್ತಿದರೆ ಕೈಯನ್ನು, ಬೆರಳು ತೋರಿಸಿದರೆ ಬೆರಳನ್ನು ಕತ್ತರಿಸುತ್ತೇವೆ ಎಂದು ಬೆದರಿಸುವ ಬಿಜೆಪಿಯವರ ಗೂಂಡಾ ಪ್ರವೃತ್ತಿಯನ್ನು ದೇಶದ ಪ್ರಜೆಯಾಗಿ ನಾನು ಪ್ರಶ್ನಿಸುತ್ತೇನೆ. ನನ್ನೊಂದಿಗೆ ಸಾರ್ವಜನಿಕರು ಪ್ರಶ್ನೆ ಮಾಡಬೇಕು ಎಂದ ಅವರು, ಪದ್ಮಾವತಿ ಸಿನೆಮಾ ಬಿಡುಗಡೆ ಮಾಡದಂತೆ ತೀರ್ಪು ಅಸಾಧ್ಯ ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ, ಅದನ್ನು ಮೀರಿ ಚಿತ್ರ ನಿಷೇಧ ಮಾಡಬೇಕು ಎಂದು ಗೂಂಡಾ ಪ್ರವೃತ್ತಿ ತೋರುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕೊಳಕು ರಾಜಕೀಯ ಬೇಡ: ಕೊಳಕು ರಾಜಕೀಯ ನನಗೆ ಬೇಡ. ಜನರಿಗೆ ಪ್ರಶ್ನೆ ಮಾಡುವ ಹಕ್ಕು ಬೇಕು. ಪ್ರತಿಯೊಬ್ಬ ಪ್ರಜೆಯೂ ಈ ಧೋರಣೆಯ ಬಗ್ಗೆ ಧ್ವನಿಯಾಗಬೇಕು. ನನ್ನ ವೈಯಕ್ತಿಕ ಜೀವನಕ್ಕೆ ನೋವಾಗುತ್ತಿದೆ. ನಿಮ್ಮ ಬಳಿ ಪವರ್ ಇರಬಹುದು. ಆದರೆ ನಾನು ಹೋರಾಟ ಮಾಡುವೆ, ಪ್ರಶ್ನೆ ಕೇಳುವ ಹಕ್ಕು ನನಗೆ ಉಳಿಯಲೇಬೇಕು ಎಂದ ಹೇಳಿದರು.

ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸುವುದಕ್ಕೂ ನನ್ನ ವಿರೋಧವಿದೆ ಎಂದ ಅವರು, ಮೋದಿ ಈ ದೇಶದ ಪ್ರಧಾನಿಯಾದರೆ ದೇಶ ಬಿಡುವೆ ಅಂತ  ಜ್ಞಾನಪೀಠ ಪುರಸ್ಕೃತರಾದ ಯು.ಆರ್.ಅನಂತಮೂರ್ತಿ ಅವರು ಹೇಳಿದ್ದರು. ಆದರೆ, ಅವರು ಸತ್ತಾಗ ಕೆಲವರು ಪಟಾಕಿ ಹೊಡೆಯುತ್ತಾರೆ, ಇದು ಸರೀನಾ ಎಂದವರು, ನಾನು ಪ್ರಜೆಯಾಗಿ ಪ್ರಶ್ನೆ ಕೇಳುವೆ, ರಾಜಕಾರಣಿಯಾಗುವ ಬಗ್ಗೆ ಆಲೋಚಿಸಿಲ್ಲ. ನಾನು ಜನರಿಗಾಗಿ ಹೋರಾಟ ಮಾಡುವೆ, ಮೋದಿ ವಿರುದ್ಧ ಧ್ವನಿ ಬಂದಾಗ ವೇದಿಕೆ ಸಿದ್ಧ ಮಾಡಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಮೈಸೂರು ಮಹಿಳೆಯರ ಬಗ್ಗೆ ಬೇಸರ ಇದೆ. ಕಾರಣ ಪ್ರತಾಪ್ ಸಿಂಹರಂತಹ ವ್ಯಕ್ತಿಗೆ ಮತ ಹಾಕಿ ಗೆಲ್ಲಿಸಿದ್ದೀರಿ. ಈಗ ನಿಮ್ಮ ಜನಪ್ರತಿನಿಧಿ ಮಾತನಾಡಿರೋದು ನೋಡಿ ಜನರಿಗೆ ಬೇಸರವಾಗುತ್ತದೆ. ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಗೀತಾ ಮಹಾದೇವ ಪ್ರಸಾದ್ ಬಗ್ಗೆ, "ಗಂಡನಿಗೆ ಪಿಂಡ ಇಡುವ ಸಮಯದಲ್ಲಿ ಗೂಟದ ಕಾರು ನೆನಪಾಯ್ತೆ?" ಎಂಬ ವೈಯಕ್ತಿಕವಾಗಿ ಟೀಕೆ ಮಾಡಿದ್ದು ಸರೀನಾ? ಗುಂಡ್ಲುಪೇಟೆ ಜನರಿಗೆ ಏನು ಮಾಡುವೆ ಅಂತ ಹೇಳಿರೊ ಹೇಳಿಕೆ ಸುದ್ದಿಯಾಯಿತು. ಹೀಗೆ ಹೇಳಿಕೆ ಕೊಟ್ಟಿದ್ದಕ್ಕೆ ಬಿಜೆಪಿ ಸೋತಿತು ಎಂದು ಪ್ರಕಾಶ್ ರೈ ಹೇಳಿದರು.

ದೇಶದ ಒಬ್ಬ ಪ್ರಜೆಯಾಗಿ ನಾನು ಮಾತನಾಡುವ, ನನ್ನ ಕೋಪ, ಆತಂಕವನ್ನು ವ್ಯಕ್ತಪಡಿಸುವ ಸ್ವಾತಂತ್ರವಿದೆ. ಇದನ್ನೇ ಕೊಲ್ಲುವ ಅಥವಾ ಗೂಂಡಾಗಿರಿ ನಡೆಸುವವರ ವಿರುದ್ಧ ನಾನು ಪ್ರಶ್ನೆ ಮಾಡಿದ್ದೇನೆ. ನನ್ನ ಪ್ರಶ್ನೆ ಯಾವುದೇ ಸಂಘಟನೆ, ರಾಜಕೀಯ ಪಕ್ಷ ಮತ್ತು ಯಾವುದೇ ಸಮುದಾಯದ ವಿರುದ್ಧವಲ್ಲ. ಹೀಗಾಗಿ, ಸಮಾಜದಲ್ಲಿ ನಡೆಯುತ್ತಿರುವ ಟ್ರೋಲ್ ಗೂಂಡಾಗಿರಿ ವಿರುದ್ಧ #Justasking ಎಂಬ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.
-ಪ್ರಕಾಶ್ ರೈ, ಬಹುಭಾಷಾ ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News