ವಾಪಸಾಗುವ ರೊಹಿಂಗ್ಯಾರಿಗೆ ಮ್ಯಾನ್ಮಾರ್‌ನಲ್ಲಿ ತಾತ್ಕಾಲಿಕ ಶಿಬಿರಗಳಲ್ಲಿ ವಾಸ

Update: 2017-11-25 16:49 GMT

ಢಾಕಾ, ನ. 25: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಡುವೆ ನಡೆದ ರೊಹಿಂಗ್ಯಾ ವಾಪಸಾತಿ ಒಪ್ಪಂದದ ಬಳಿಕ ಮ್ಯಾನ್ಮಾರ್‌ಗೆ ಹಿಂದಿರುಗುವ ರೊಹಿಂಗ್ಯಾ ನಿರಾಶ್ರಿತರು, ಆರಂಭದಲ್ಲಿ ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸಬೇಕಾಗುತ್ತದೆ ಎಂದು ಬಾಂಗ್ಲಾದೇಶ ಶನಿವಾರ ಹೇಳಿದೆ.

‘‘ಆರಂಭದಲ್ಲಿ ಅವರನ್ನು ಸೀಮಿತ ಅವಧಿಗೆ ತಾತ್ಕಾಲಿಕ ಶಿಬಿರಗಳಲ್ಲಿ ಇರಿಸಲಾಗುತ್ತದೆ’’ ಎಂದು ಬಾಂಗ್ಲಾದೇಶ ವಿದೇಶ ಸಚಿವ ಎ.ಎಚ್. ಮಹಮೂದ್ ಅಲಿ ರಾಜಧಾನಿ ಢಾಕಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಆಗಸ್ಟ್ ಬಳಿಕ, ಮ್ಯಾನ್ಮಾರ್‌ನಲ್ಲಿ ಸೇನಾ ಕಾರ್ಯಾಚರಣೆಗೆ ಬೆದರಿ ಸುಮಾರು 6.20 ಲಕ್ಷ ರೊಹಿಂಗ್ಯಾ ಮುಸ್ಲಿಮರು ರಖೈನ್ ರಾಜ್ಯದಿಂದ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಗುರುವಾರ ರೊಹಿಂಗ್ಯಾ ಮುಸ್ಲಿಮರ ವಾಪಸಾತಿ ಒಪ್ಪಂದಕ್ಕೆ ಸಹಿ ಹಾಕಿವೆ.

 ಈ ಒಪ್ಪಂದದ ಪ್ರಕಾರ, ಉತ್ತರ ರಖೈನ್ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಮ್ಯಾನ್ಮಾರ್ ಸಾಮಾನ್ಯ ಸ್ಥಿತಿಗೆ ತರಬೇಕು ಹಾಗೂ ಮ್ಯಾನ್ಮಾರ್‌ನಿಂದ ಪಲಾಯನಗೈದವರು ತಮ್ಮ ಮನೆಗಳಿಗೆ ಅಥವಾ ಮನೆಗಳಿಗೆ ಹತ್ತಿರದ ತಮ್ಮ ಆಯ್ಕೆಯ ಸುರಕ್ಷಿತ ಸ್ಥಳಗಳಿಗೆ ಸ್ವಯಂಪ್ರೇರಿತವಾಗಿ ವಾಪಸಾಗುವಂತೆ ಪ್ರೋತ್ಸಾಹಿಸಬೇಕು.

‘‘ವಾಪಸಾದವರು ತಾತ್ಕಾಲಿಕ ಸ್ಥಳಗಳಲ್ಲಿ ಸುದೀರ್ಘ ಕಾಲ ನೆಲೆಸದಂತೆ ಮ್ಯಾನ್ಮಾರ್ ಎಲ್ಲ ಸಾಧ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಹಾಗೂ ಚಾಲ್ತಿಯಲ್ಲಿರುವ ಕಾನೂನುಗಳು ಮತ್ತು ನಿಯಮಾವಳಿಗಳಿಗೆ ಅನುಸಾರವಾಗಿ ರಖೈನ್ ರಾಜ್ಯದಲ್ಲಿ ಅವರ ಮುಕ್ತ ಓಡಾಟಕ್ಕೆ ಅವಕಾಶ ಕಲ್ಪಿಸಲಿದೆ’’ ಎಂದು ಒಪ್ಪಂದ ತಿಳಿಸಿದೆ.

ಮನೆ ಸುಟ್ಟು ಹೋಗಿದೆ; ಶಿಬಿರಗಳಲ್ಲದೆ ಬೇರೆ ದಾರಿಯಿಲ್ಲ

ಹಿಂಸಾಚಾರದ ದಿನಗಳಲ್ಲಿ ಹೆಚ್ಚಿನ ರೊಹಿಂಗ್ಯಾ ಗ್ರಾಮಗಳು ಬೆಂಕಿಗಾಹುತಿಯಾಗಿರುವುದರಿಂದ, ಹೆಚ್ಚಿನ ರೊಹಿಂಗ್ಯಾ ನಿರಾಶ್ರಿತರಿಗೆ ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸದೆ ಬೇರೆ ದಾರಿಯಿಲ್ಲ ಎಂದು ಸಚಿವ ಮಹಮೂದ್ ಅಲಿ ನುಡಿದರು.

‘‘ಹೆಚ್ಚಿನ ಗ್ರಾಮಗಳು ಸುಟ್ಟುಹೋಗಿವೆ. ಹಾಗಾಗಿ, ಅವರು ಎಲ್ಲಿಗೆ ವಾಪಸಾಗುತ್ತಾರೆ? ಅಲ್ಲಿ ಮನೆಗಳಿಲ್ಲ. ಅವರು ಎಲ್ಲಿ ವಾಸಿಸುತ್ತಾರೆ? ತಮ್ಮ ಮನೆಗಳಿಗೆ ಹಿಂದಿರುಗಲು ಅವರಿಗೆ ಸಾಧ್ಯವಾಗುವುದಿಲ್ಲ’’ ಎಂದರು.

ಪರಿಸ್ಥಿತಿ ಪೂರಕವಾಗಿಲ್ಲ: ವಿಶ್ವಸಂಸ್ಥೆಯ ವಲಸಿಗರ ಸಂಸ್ಥೆ

ಅದೇ ವೇಳೆ, ರೊಹಿಂಗ್ಯಾ ನಿರಾಶ್ರಿತರ ವಾಪಸಾತಿ ಒಪ್ಪಂದದ ಬಗ್ಗೆ ವಿಶ್ವಸಂಸ್ಥೆಯ ವಲಸಿಗರ ಸಂಸ್ಥೆ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.

‘‘ಈ ಹಂತದಲ್ಲಿ, ರೊಹಿಂಗ್ಯಾ ನಿರಾಶ್ರಿತರ ಸುರಕ್ಷಿತ ಹಾಗೂ ಖಾಯಂ ವಾಪಸಾತಿಗೆ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿನ ಪರಿಸ್ಥಿತಿ ಪೂರಕವಾಗಿಲ್ಲ’’ ಎಂದು ಅದು ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News