ಪಾಕ್: ಧರಣಿ ನಿರತರನ್ನು ಚದುರಿಸಲು ಪೊಲೀಸ್ ಕಾರ್ಯಾಚರಣೆ

Update: 2017-11-25 17:08 GMT

ಇಸ್ಲಾಮಾಬಾದ್, ನ. 25: ಮೂರು ವಾರಗಳಿಂದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಪ್ರಮುಖ ರಸ್ತೆಯೊಂದರಲ್ಲಿ ಧರಣಿ ನಡೆಸುವ ಮೂಲಕ ರಾಜಧಾನಿಯಲ್ಲಿ ಅವ್ಯವಸ್ಥೆ ಉಂಟು ಮಾಡುತ್ತಿರುವ ಧಾರ್ಮಿಕ ಸಂಘಟನೆಯೊಂದರ ಕಾರ್ಯಕರ್ತರನ್ನು ಚದುರಿಸಲು ಭದ್ರತಾ ಪಡೆಗಳು ಶನಿವಾರ ದಮನ ಕಾರ್ಯಾಚರಣೆ ನಡೆಸಿವೆ.

ಪೊಲೀಸ್ ಕಾರ್ಯಾಚರಣೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ 130ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅದೇ ವೇಳೆ, ಓರ್ವ ಪೊಲೀಸ್ ಸಿಬ್ಬಂದಿಯೂ ಸಾವನ್ನಪ್ಪಿದ್ದಾರೆ.

ದಮನ ಕಾರ್ಯಾಚರಣೆ ಬಳಿಕ ಪ್ರತಿಭಟನೆಗಳು ದೇಶದ ಇತರ ನಗರಗಳಿಗೂ ವ್ಯಾಪಿಸಿವೆ.

ಪ್ರತಿಭಟನಾಕಾರರು ತಾವು ಧರಣಿ ನಡೆಸುತ್ತಿರುವ ಸ್ಥಳದ ಸಮೀಪಕ್ಕೆ ಬರುವ ಪೊಲೀಸ್ ವಾಹನಗಳಿಗೆ ಬೆಂಕಿ ಕೊಡುತ್ತಿದ್ದಾರೆ.

ಸಾವಿರಾರು ಸಂಖ್ಯೆಯ ಭದ್ರತಾ ಸಿಬ್ಬಂದಿ ಶನಿವಾರ ಪ್ರತಿಭಟನಾಕಾರರತ್ತ ಅಶ್ರುವಾಯು ಸಿಡಿಸಿ ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ.

ಪ್ರತಿಭಟನಾಕಾರರು ಎಸೆದ ಕಲ್ಲು ತಲೆಗೆ ತಗುಲಿ ಓರ್ವ ಪೊಲೀಸ್ ಮೃತಪಟ್ಟಿರುವುದನ್ನು ಇಸ್ಲಾಮಾಬಾದ್ ಪೊಲೀಸ್ ವಕ್ತಾರರೊಬ್ಬರು ಖಚಿತಪಡಿಸಿದರು.

ಅದೇ ವೇಳೆ, ಓರ್ವ ಪ್ರತಿಭಟನಾಕಾರನ ಶವವೂ ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಿರುವುದಾಗಿ ಎಎಫ್‌ಪಿ ಪತ್ರಕರ್ತರೊಬ್ಬರು ವರದಿ ಮಾಡಿದ್ದಾರೆ.

139 ಮಂದಿಯನ್ನು ಇಸ್ಲಾಮಾಬಾದ್‌ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಅವರ ಪೈಕಿ 93 ಮಂದಿ ಭದ್ರತಾ ಸಿಬ್ಬಂದಿಗಳು ಎಂದು ವಕ್ತಾರರು ತಿಳಿಸಿದರು.

ಕಾನೂನು ಸಚಿವರ ರಾಜೀನಾಮೆಗೆ ಒತ್ತಾಯ

ಚುನಾಯಿತ ಪ್ರತಿನಿಧಿಗಳು ತೆಗೆದುಕೊಳ್ಳುವ ಪ್ರಮಾಣವಚನದಲ್ಲಿ ಬದಲಾವಣೆಗಳನ್ನು ಮಾಡಲು ಹೊರಟ ಕಾನೂನು ಸಚಿವ ಝಾಹಿದ್ ಹಮೀದ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಂಘಟನೆಯ ಸದಸ್ಯರು ಧರಣಿ ನಡೆಸುತ್ತಿದ್ದಾರೆ.

ಈ ಬದಲಾವಣೆಯ ಪ್ರಸ್ತಾಪವನ್ನು ಸರಕಾರ ಈಗಾಗಲೇ ಹಿಂದಕ್ಕೆ ಪಡೆದುಕೊಂಡಿದೆ ಹಾಗೂ ಅದು ‘ಬರೆಯುವಾಗ ಆದ ತಪ್ಪು’ ಎಂದು ಹೇಳಿದೆ.

ಟಿವಿ ಚಾನೆಲ್‌ಗಳು ಬಂದ್

ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನಾಕಾರರ ವಿರುದ್ಧ ಶನಿವಾರ ನಡೆದ ದಮನ ಕಾರ್ಯಾಚರಣೆಯ ವೇಳೆ, ಪ್ರಸಾರ ಸ್ಥಗಿತಗೊಳಿಸುವಂತೆ ಪಾಕಿಸ್ತಾನ ಸರಕಾರ ಖಾಸಗಿ ಟೆಲಿವಿಶನ್ ಚಾನೆಲ್‌ಗಳಿಗೆ ಆದೇಶ ನೀಡಿದೆ.

ಪೊಲೀಸ್ ಕಾರ್ಯಾಚರಣೆಯ ನೇರಪ್ರಸಾರವನ್ನು ತೋರಿಸುವ ಮೂಲಕ ಸುದ್ದಿ ಚಾನೆಲ್‌ಗಳು ಮಾಧ್ಯಮ ನಿಯಮಾವಳಿಗಳನ್ನು ಉಲ್ಲಂಘಿಸಿರುವುದಕ್ಕಾಗಿ ಪಾಕಿಸ್ತಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಈ ಆದೇಶ ನೀಡಿದೆ ಎಂದು ಪ್ರಾಧಿಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆದಾಗ್ಯೂ, ಸರಕಾರಿ ಒಡೆತನದ ‘ಪಾಕಿಸ್ತಾನ್ ಟೆಲಿವಿಶನ್’ ಈ ಸಂದರ್ಭದಲ್ಲಿ ತನ್ನ ಪ್ರಸಾರವನ್ನು ಮುಂದುವರಿಸಿತು. ಆದರೆ, ಅದು ಈ ಅವಧಿಯಲ್ಲಿ ಬೇರೆ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News