ಡಿ.17ರಂದು 287 ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ
ಬೆಂಗಳೂರು, ನ. 27: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊರತುಪಡಿಸಿ ರಾಜ್ಯದ ಉಳಿದ 29 ಜಿಲ್ಲೆಗಳ 207 ಗ್ರಾ.ಪಂಗಳಲ್ಲಿ ವಿವಿಧ ಕಾರಣಗಳಿಗಾಗಿ ತೆರವಾಗಿರುವ 287 ಸದಸ್ಯ ಸ್ಥಾನಗಳಿಗೆ ಡಿ.17ಕ್ಕೆ ಉಪ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಆಯಾ ಜಿಲ್ಲಾಧಿಕಾರಿಗಳು ನ.27ಕ್ಕೆ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ನ.30ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿ.1ಕ್ಕೆ ನಾಮಪತ್ರ ಪರಿಶೀಲನೆ, ಡಿ.4ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ. ಡಿ.17ರ ಬೆಳಗ್ಗೆ 7ರಿಂದ ಸಂಜೆ 5ಗಂಟೆ ವರೆಗೆ ಮತದಾನ ನಡೆಯಲಿದೆ.
ಮತ ಎಣಿಕೆ ಕಾರ್ಯವು ಆಯಾ ತಾಲೂಕು ಕೇಂದ್ರಗಳಲ್ಲಿ ಡಿ.20ರ ಬೆಳಗ್ಗೆ 8ಗಂಟೆಯಿಂದ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟಿಸಲಾಗುವುದು. ಚುನಾವಣೆ ನಡೆಯಲಿರುವ ಗ್ರಾ.ಪಂ ಹಾಗೂ ತಾ.ಪಂಗಳ ಕ್ಷೇತ್ರ ವ್ಯಾಪ್ತಿಯಲ್ಲಿ ನ.27ರಿಂದ ಡಿ.20ರ ವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.