ಕುವೆಂಪು ಸಾಹಿತ್ಯ ಬ್ರಹ್ಮ ಸಮಾಜದ ಪ್ರೇರಣೆ ಪಡೆದಿದೆ: ಮಲ್ಲೇಪುರಂ ಜಿ.ವೆಂಕಟೇಶ್
ಬೆಂಗಳೂರು, ನ.27: ಕುವೆಂಪು ಸಾಹಿತ್ಯವು ಬ್ರಹ್ಮ ಸಮಾಜದ ಪ್ರೇರಣೆ ಪಡೆದಿದೆ. ಹೀಗಾಗಿ ಬ್ರಹ್ಮ ಸಮಾಜದ ಸಿದ್ಧಾಂತದಡಿ ಅವರ ಸಾಹಿತ್ಯವನ್ನು ವಿಶ್ಲೇಷಿಸಿದರೆ ಹೊಸ ಹೊಳಹುಗಳು ದೊರಕಬಹುದೆಂದು ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಹಾಗೂ ಬೆಂಗಳೂರು ಬ್ರಹ್ಮ ಸಮಾಜ ಸಂಸ್ಥೆಯ ಸಹಯೋಗದಲ್ಲಿ ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆದ ಸರ್.ಆರ್. ವೆಂಕಟರತ್ನಂ ನಾಯ್ಡು ಅವರ ಸಾಮಾಜಿಕ ಕೆಲಸಗಳ ಸಮಗ್ರ ಕೃತಿಯ 3 ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುವೆಂಪು ಸಾಹಿತ್ಯದಲ್ಲಿ ಆನಂದ, ಚೈತನ್ಯ ಹಾಗೂ ಲೀಲೆಗಳ ಅಂಶಗಳನ್ನು ಗಮನಿಸಬಹುದು. ಇದು ರವೀಂದ್ರನಾಥ ಠಾಕೂರ್ ಅವರಿಂದ ಪ್ರೇರಿತವಾದ ಅಂಶಗಳು. ಅಲ್ಲದೆ ಜಡತ್ವ ಎಂಬುದು ಸುಳ್ಳು ಎಂಬ ಅವರ ಪರಿಕಲ್ಪನೆ ಸಿಕ್ಕಿದ್ದು ಕಲ್ಕತ್ತದ ಬ್ರಹ್ಮ ಸಮಾಜದ ಮೂಲಕವೇ ಆಗಿದೆ. ರವೀಂದ್ರನಾಥ ಠಾಕೂರ್ ಅವರ ಗೀತಾಂಜಲಿಯಲ್ಲಿ ಆನಂದ, ಸಂತೋಷದ ವಿಷಯಗಳನ್ನು ತಿಳಿಯಬಹುಪು ಅದು. ಆದರೆ ಕುವೆಂಪುರನ್ನು ಬ್ರಹ್ಮ ಸಮಾಜದ ಹಿನ್ನೆಲೆಯಲ್ಲಿ ಇನ್ನೂ ಅಧ್ಯಯನಗಳು ನಡೆದಿಲ್ಲ. ಈ ಬಗ್ಗೆ ವಿಮರ್ಶಕರು ಹೆಚ್ಚಿನ ಗಮನ ಕೊಡಬೇಕು ಎಂದು ಹೇಳಿದರು.
ಕಲ್ಕತ್ತಾದಲ್ಲಾದ ಸಂಪೂರ್ಣ ಪುನರುತ್ಥಾನದ ಕ್ರಾಂತಿಯು ಆಂಧ್ರ ಹಾಗೂ ಕರ್ನಾಟಕಕ್ಕೆ ಹಬ್ಬಿತು. ಕುವೆಂಪು ಅವರ ಬರವಣಿಗೆಯಲ್ಲಿ ಆನಂದ, ಚೈತನ್ಯ ಹಾಗೂ ಲೀಲೆಗಳ ವಿಚಾರಗಳನ್ನು ಕಾಣಬಹುದಾಗಿದ್ದು, ಇದು ಬ್ರಹ್ಮ ಸಮಾಜದ ಪರಿಕಲ್ಪನೆ. ಆದರೆ ಮೂಲತಃ ಇವೆಲ್ಲವೂ ಉಪನಿಷತ್‌ನಿಂದ ಹಾಗೂ ಕಲ್ಕತ್ತದ ಬ್ರಹ್ಮ ಸಮಾಜದ ಮೂಲಕ ಪ್ರೇರಿತವಾದ ಅಂಶಗಳು. ಕುವೆಂಪು ಅವರ ಬರವಣಿಗೆ, ಭಾವಗಳು ಬ್ರಹ್ಮ ಸಮಾಜದ ಪರಿಕಲ್ಪನೆಯನ್ನು ಪರೋಕ್ಷವಾಗಿ ಕಾಣಬಹುದು ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಚಾಲಯ್ಯ ಮಾತನಾಡಿ, ಸಾಮಾಜಿಕ ಚಳವಳಿಗಳಲ್ಲಿ ಘರ್ಷಣೆಯೇ ಪ್ರಧಾನವಾಗಿದ್ದ ಕಾಲದಲ್ಲಿ ಆನಂದ, ಚೈತನ್ಯ ಮುಖ್ಯ ಎಂದು ವೆಂಕಟರತ್ನಂ ಪ್ರತಿಪಾದಿಸಿದರು. ವೆಂಕಟರತ್ನಂ ತಮ್ಮ ಬರವಣಿಗೆಗಳಲ್ಲಿ ಆನಂದವನ್ನು ಅನುಭವಿಸಿದರು ಎಂಬ ಸಂಗತಿ ಅವರ ಕೃತಿಗಳ ಮೂಲಕ ತಿಳಿಯುತ್ತದೆ. ವೆಂಕಟರತ್ನಂಗೆ ಆಗಿರುವ ಆನಂದ ಅವರ ಭಾಷೆಯಲ್ಲಿ ಪ್ರತೀತಗೊಳ್ಳುತ್ತಿದೆ ಎಂದರು.
ಶೇಷಾದ್ರಿಪುರಂ ಕಾಲೇಜಿನ ಗೌರವ ಕಾರ್ಯದರ್ಶಿ ಡಾ. ವೂಡೆ.ಪಿ. ಕೃಷ್ಣ ಮಾತನಾಡಿ, ಸಾಮಾಜಿಕ ಹೋರಾಟಗಾರ ಆರ್.ವೆಂಕಟರತ್ನಂ ನಾಯ್ಡು ಅಂದಿನ ಕಾಲದಲ್ಲಿ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿದವರು ಹಾಗೂ ಸಾರ್ವಜನಿಕ ಜೀವನದಲ್ಲಿ ಪರಿಶುದ್ಧ ಜೀವನ ಶೈಲಿ ಹೇಗೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು. ಹೀಗಾಗಿ ಇಂದಿನ ಯುವ ಜನತೆ ವೆಂಕಟರತ್ನಂ ಜೀವನ ಚರಿತ್ರೆುಂದ ತಿಳಿದುಕೊಳ್ಳಬೇಕಿದೆ ಎಂದು ಅಭೊಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಬ್ರಹ್ಮ ಸಮಾಜದ ಕಾರ್ಯದರ್ಶಿ ಡಬ್ಲು.ಎಚ್.ದೇವಕುಮಾರ್, ಕರ್ನಾಟಕ ಸಂಸ್ಕೃತಿ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ವಿನಯ್, ಕಾಲೇಜು ಪ್ರಾಂಶುಪಾಲೆ ಡಾ.ಅನುರಾಧ ರಾಯ್ ಮತ್ತಿತರರಿದ್ದರು.