×
Ad

ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಆರೋಪ

Update: 2017-11-27 20:01 IST

ಬೆಂಗಳೂರು, ನ. 27: ಸಂವಿಧಾನ ರಚನೆ ದಿನದ ಪ್ರಯುಕ್ತ ರಾಜ್ಯ ಸರಕಾರ ನೀಡಿದ ಜಾಹೀರಾತಿನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವಿಲ್ಲವೆಂದು ತಗಾದೆ ತೆಗೆದಿದ್ದ ಬಿಜೆಪಿ ಮುಖಂಡರು ತಮ್ಮ ಕಚೇರಿಯಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಸದ ರದ್ದಿಯಲ್ಲಿಟ್ಟು ಅಪಮಾನ ಮಾಡಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ದಸಂಸ ಕಾರ್ಯಕರ್ತರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದಲ್ಲದೆ, ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು. ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ವೀಡಿಯೊದಲ್ಲೇನಿದೆ: ಇಲ್ಲಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಸ ಹಾಕುವ ಜಾಗದಲ್ಲಿ ಇಟ್ಟಿದ್ದು, ಅದೇ ಸ್ಥಳದಲ್ಲಿ ಹಳೆಯ ರದ್ದಿ ಪತ್ರಿಕೆಗಳು, ಕೈತೊಳೆಯುವ ತೊಟ್ಟಿಯೂ ಸಮೀಪದಲ್ಲಿದೆ. ಸಂವಿಧಾನ ರಚನೆ ದಿನಾಚರಣೆ ಜಾಹೀರಾತಿನಲ್ಲಿ ಅಂಬೇಡ್ಕರ್ ಭಾವಚಿತ್ರವಿಲ್ಲ ಎಂದು ಟೀಕಿಸುವ ಬಿಜೆಪಿ ಮುಖಂಡರಿಗೆ ನೈತಿಕತೆ ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬಂದಿದೆ.

ದಸಂಸ ರಾಜ್ಯಾಧ್ಯಕ್ಷ ಸಿ.ಎಸ್.ರಘು ನೇತೃತ್ವದಲ್ಲಿ ಕಾರ್ಯಕರ್ತರು ಬಿಜೆಪಿ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಬಿಜೆಪಿ ಕಚೇರಿಗೆ ಬೀಗಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರಘು, ಸಿಎಂ ಸಿದ್ದರಾಮಯ್ಯ ನೀಡಿದ ಜಾಹೀರಾತಿನಲ್ಲಿ ಅಂಬೇಡ್ಕರ್ ಭಾವಚಿತ್ರವಿಲ್ಲ ಎಂದು ಪ್ರಶ್ನಿಸುವವರೇ ಅಂಬೇಡ್ಕರ್ ಭಾವಚಿತ್ರವನ್ನು ಕಸದ ಬುಟ್ಟಿಯಲ್ಲಿ ಎಸೆದಿದ್ದಾರೆ. ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮಿ ಅಂಬೇಡ್ಕರ್ ಒಬ್ಬರೆ ಸಂವಿಧಾನ ರಚಿಸಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಕೋಮುವಾದಿಗಳ ನಿಜಬಣ್ಣವನ್ನು ದಲಿತರು ಅರಿತುಕೊಳ್ಳಬೇಕು. ಬಿಜೆಪಿಯಲ್ಲಿನ ದಲಿತ ಮುಖಂಡರು ಮೊದಲು ಬಿಜೆಪಿ ಪಕ್ಷವನ್ನು ತೊರೆಯಬೇಕು ಎಂದು ತಿಳಿಸಿದರು.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರ ಮನವೋಲಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆ ಬಳಿಕ ದಸಂಸ ಕಾರ್ಯಕರ್ತರು, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ, ಕೂಡಲೇ ಅವರನ್ನು ಬಂಧಿಸಬೇಕೆಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು.

ಬಿಜೆಪಿ ಕೋಮುವಾದಿ ಪಕ್ಷ. ಬಿಜೆಪಿಯವರಿಗೆ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಕಿಂಚಿತ್ತು ಗೌರವವಿಲ್ಲ ಎಂಬುದು ಸಾಬೀತಾಗಿದೆ. ಇದೀಗ ಅಂಬೇಡ್ಕರ್ ಅವರ ಭಾವಚಿತ್ರವನ್ನು ಅವರು ಕಸದ ಬುಟ್ಟಿಯಲ್ಲಿದ್ದು ಹೊಸ ಸೇರ್ಪಡೆಯಷ್ಟೇ. ಸಂಸದೆ ಶೋಭಾ ಕರಂದ್ಲಾಜೆ ಬಂಧಿಸುವವರೆಗೂ ನಮ್ಮ ಹೋರಾಟ ನಿಲ್ಲದು.
-ಸಿ.ಎಸ್.ರಘು, ದಸಂಸ ರಾಜ್ಯಾಧ್ಯಕ್ಷ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News