×
Ad

ಪೊಲೀಸ್ ಇಲಾಖೆಯಲ್ಲಿ ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗಲಿ: ರಾಮಲಿಂಗಾರೆಡ್ಡಿ

Update: 2017-11-27 20:43 IST

ಬೆಂಗಳೂರು, ನ.27: ಕಲೆ ಮತ್ತು ಸಾಹಿತ್ಯ ಹುಟ್ಟಿನಿಂದಲೇ ಬರುವಂತಹವು, ಯಾವುದೇ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದರು ಅವುಗಳಿಗೆ ಚ್ಯುತಿ ಬರದ ಹಾಗೆ ಕಾಪಾಡಿಕೊಂಡು ಹೋಗುವುದು ಅವರವರಿಗೆ ಬಿಟ್ಟದ್ದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಂಗಳೂರು ನಗರ ಪೊಲೀಸ್, ಪೊಲೀಸ್ ಸಾಹಿತ್ಯ ವೇದಿಕೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಸಾಹಿತ್ಯ ಸಂಭ್ರಮದಲ್ಲಿ ಕವಿಗೋಷ್ಠಿ ಮತ್ತು ಸಮವಸ್ತ್ರದೊಳಗೊಂದು ಸುತ್ತು-ಸಂಪುಟ 4 ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ನೀಡಲಾಗುತ್ತೆ ಎಂದು ತಿಳಿಸಿದರು.

ಕನ್ನಡದ ಮೊದಲ ಸಾಮಾಜಿಕ ಕಾದಂಬರಿಕಾರ ಗುಲ್ವಾಡಿ ವೆಂಕಟರಾವ್, ಬೀಚಿಯವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದವರು. ಪ್ರಸ್ತುತ ಇಲಾಖೆಯಲ್ಲಿ ಅನೇಕ ಸಾಹಿತಿಗಳಿದ್ದಾರೆ. ಇಲಾಖೆಯಲ್ಲಿ ಸಮಯವನ್ನು ಮಾಡಿಕೊಂಡು ಸಾಹಿತ್ಯ ಕೃಷಿ ಮಾಡುತ್ತಿರುವ ಎಲ್ಲ್ಲರಿಗೂ ಶುಭವಾಗಲಿ ಎಂದರು.

ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಕನ್ನಡವನ್ನು ಕಲಿಯಬೇಕು. ಭಾಷೆ ಕಲಿತಾಗ ಇಲ್ಲಿನ ಸಾಹಿತ್ಯ ಓದಲು ಸಾಧ್ಯ. ಇಲಾಖೆಯಲ್ಲಿ ಇನ್ನೂ ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗಲಿ ಎಂದು ರಾಮಲಿಂಗಾರೆಡ್ಡಿ ಹಾರೈಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಕನ್ನಡ ಅನುಷ್ಠಾನದಲ್ಲಿ ರಾಜ್ಯ ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚಿಗೆ ಇಲಾಖೆಯಲ್ಲಿ ಕನ್ನಡದ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದಾಗ ಇಲಾಖೆಯಲ್ಲಿ ಅತ್ಯುತ್ತಮ ಕವಿಗಳು ಇರುವುದು ತಿಳಿಯಿತು. ಇಷ್ಟು ಬೇಗ ಕವಿ ಸಮ್ಮೇಳನ ಮತ್ತು ನಾಲ್ಕನೆ ಸಂಪುಟ ಬಿಡುಗಡೆ ಮಾಡುತ್ತಿರುವುದು ಇಲಾಖೆಗೆ ಕನ್ನಡದ ಬಗ್ಗೆ ಇರುವ ಕಾಳಜಿ ಮತ್ತು ಪ್ರೀತಿಯನ್ನು ತೋರಿಸುತ್ತದೆ ಎಂದರು.

ಮಾನವೀಕರಣಕ್ಕೆ ಸಾಹಿತ್ಯ ಅಗತ್ಯ, ಇದೊಂದು ಉತ್ತಮ ಸಂಕಲನವಾಗಿದ್ದು, ಅನುಭವದಿಂದ ಹುಟ್ಟಿರುವ ಅತಿ ಸೂಕ್ಷ್ಮ ಕವಿತೆಗಳ ಪುಸ್ತಕವಾಗಿದೆ. ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಿಂದ ನಡೆಯುತ್ತಿರುವ ಸಾಹಿತ್ಯದ ಅತಿದೊಡ್ಡ ಕಾರ್ಯಕ್ರಮ ಇದಾಗಿದೆ. ನಾಡಿನ ಇತರೆಡೆಗಳಲ್ಲಿಯೂ ಇದು ನಿರಂತರವಾಗಿ ನಡೆಯುವಂತಾಗಲಿ ಎಂದು ಅವರು ಶುಭ ಹಾರೈಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಮಾತನಾಡಿ, ತಾನು ರಾಜ್ಯಕ್ಕೆ ಮೊದಲು ಬಂದಾಗ ಆದ ಅನುಭವಗಳನ್ನು ಮತ್ತು ಕನ್ನಡ ಕಲಿಯುತ್ತಿದ್ದ ಪ್ರಾರಂಭದ ದಿನಗಳಲ್ಲಿ ಹೇಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ ಅವರ ‘ಕಲಿಯಬೇಕು’ ಕವಿತೆಯನ್ನು ಇಷ್ಟಪಟ್ಟು ತಮ್ಮ ಕೊಠಡಿಯಲ್ಲಿ ಅಂಟಿಸಿಕೊಂಡಿದ್ದ ನೆನಪುಗಳನ್ನು ಬಿಚ್ಚಿಟ್ಟರು.

ನಾನು ಈಗಲೂ ಕುವೆಂಪು ರಚನೆಯ ಹಾಡುಗಳನ್ನು ವಿವಿಧ ಭಾರತಿಯಲ್ಲಿ ಕೇಳುವ ಹವ್ಯಾಸವನ್ನು ಬೆಳಸಿಕೊಂಡಿದ್ದೇನೆ ಎಂದು ಹೇಳುತ್ತಾ ಭಾವುಕರಾಗಿ ಅನಂತಮೂರ್ತಿ ಅವರ ಕವಿತೆ ‘ಕಲಿಯಬೇಕು’ ಸಾಲುಗಳನ್ನು ಹೇಳಿದರು. ಅಲ್ಲದೆ, ಯುವಕರಾಗಿದ್ದಾಗ ಎಲ್ಲರೂ ಕವಿಗಳೆ, ಅದನ್ನು ಮುಂದುವರೆಸಿಕೊಂಡು ಹೋದವರು ಮಾತ್ರ ನಿಜವಾದ ಕವಿಗಳು. ಪೊಲೀಸ್ ಇಲಾಖೆಯಲ್ಲಿನ ಕವಿಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹಕ್ಕೆ ತಾವು ಸಿದ್ಧವೆಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಡಾ.ಡಿ.ಸಿ.ರಾಜಪ್ಪ ಪ್ರಸ್ತಾವಿಕ ಮಾತುಗಳನ್ನಾಡಿದರು. ಕವಿ ಡಾ.ಎಚ್.ಎಸ್.ವೆಂಕಟೇಶ್‌ಮೂರ್ತಿ ಉದ್ಘಾಟಿಸಿದ ಕವಿಗೋಷ್ಠಿಯಲ್ಲಿ ಪೊಲೀಸ್ ಇಲಾಖೆಯಲ್ಲಿನ ಕವಿಗಳಾದ ರವಿಕಾಂತೇಗೌಡ, ಧರಣೀದೇವಿ ಮಾಲಗತ್ತಿ, ಎಂ.ನಂಜುಂಡಸ್ವಾಮಿ ಸೇರಿದಂತೆ 30 ಕವಿಗಳು ತಮ್ಮ ಕವಿತೆಗಳನ್ನು ವಾಚನ ಮಾಡಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್‌ಕುಮಾರ್‌ಸಿಂಹ ವಹಿಸಿದ್ದರು.

ಈ ಸಂದರ್ಭದಲ್ಲಿ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸೇರಿದಂತೆ ಅನೇಕ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News