ಡಿ.1 ರಿಂದ ‘ಆಳ್ವಾಸ್ ನುಡಿ ಸಿರಿ’
ಬೆಂಗಳೂರು, ನ.27: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಚರಿಸುವ ಆಳ್ವಾಸ್ ನುಡಿಸಿರಿ ಹಾಗೂ ನಾಡು-ನುಡಿಯ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಡಿ.1 ರಿಂದ ಮೂರು ದಿನಗಳ ಕಾಲ ಆಳ್ವಾಸ್ ಕ್ಯಾಂಪಸ್‌ನ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಗೋಪಾಲಕೃ್ಣ ಅಡಿಗ ಸಭಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಗತ ಸಮಿತಿ ಸದಸ್ಯ ಡಾ.ನಾ. ದಾಮೋದರ್ ಶೆಟ್ಟಿ, ಕರ್ನಾಟಕ-ಬಹುತ್ವದ ನೆಲೆಗಳು ಎಂಬ ಪರಿಕಲ್ಪನೆಯಲ್ಲಿ ನಡೆಯಲಿರುವ ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್‌ರನ್ನು ಆಯ್ಕೆ ಮಾಡಲಾಗಿದೆ. ನುಡಿಸಿರಿಯನ್ನು ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಉದ್ಘಾಟಿಸಲಿದ್ದು, ನಿಟ್ಟೆ ವಿವಿ ಕುಲಪತಿ ಡಾ.ಎನ್.ವಿನಯ ಹೆಗ್ಡೆ, ಡಾ.ಮೋಹನ್ ಆಳ್ವ, ಕಸಾಪ ಅಧ್ಯಕ್ಷ ಮನುಬಳಿಗಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನುಡಿ ಸಿರಿ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಸಾಹಿತ್ಯ-ಆಶಯದ ನೆಲೆ, ಮಾಧ್ಯಮ-ಸ್ವಮಿಮರ್ಶೆಯ ನೆಲೆ, ಧಾರ್ಮಿಕ ಬಹುತ್ವ-ಸಹಬಾಳ್ವೆಯ ನೆಲೆ ವಿಷಯ ಕುರಿತು ವಿಚಾರ ಗೋಷ್ಠಿಗಳು, ಚಿತ್ರಕಲೆ, ರಂಗಭೂಮಿ ಮತ್ತು ಪ್ರದರ್ಶನ ಕಲೆ, ಜೀವನ ವಿಧಾನ-ಸಮಸ್ಯೆಗಳು ಮತ್ತು ಸವಾಲುಗಳು, ಶಾಲಾ ಶಿಕ್ಷಣದ ಸ್ಥಿತಿಗತಿ-ಸಾಧ್ಯತೆಗಳು ಮತ್ತು ಸವಾಲುಗಳು, ಕಲಾಭಿರುಚಿ, ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳು, ನಂಬಿಕೆ ಮತ್ತು ವೈಚಾರಿಕತೆ, ಅಭಿವ್ಯಕ್ತಿ ಸ್ವಾತಂತ್ರ ವಿಷಯಗಳ ಕುರಿತು ಹಲವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಇದೇ ವೇಳೆ ನಾಡು, ನುಡಿಗೆ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ, ಸಾಹಿತಿ ಗೋಪಾಲಕೃಷ್ಣ ಅಡಿಗ ಹಾಗೂ ಎಂ.ಕೆ.ಇಂದಿರಾ ಅವರಿಗೆ ಶತಮಾನೋತ್ಸವದ ನಮನ ಹಾಗೂ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ನಿವೃತ್ತ ಲೋಕಾಯುಕ್ತ ಡಾ.ಎನ್.ಸಂತೋಷ್ ಹೆಗ್ಡೆ, ಪದ್ಮರಾಜ ದಂಡಾವತಿ, ಡಾ.ತೇಜಸ್ವಿ ಕಟ್ಟೀಮನಿ, ಬಿಷಪ್ ಹೆನ್ರಿ ಡಿ’ಸೋಜ ಸೇರಿದಂತೆ 15 ಜನರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಲಾಗುತ್ತಿದೆ. ಜತೆಗೆ, ನುಡಿಸಿರಿ ಅಂಗವಾಗಿ ನ.30 ರಂದು ಕೃಷಿ ಮತ್ತು ವಿದ್ಯಾರ್ಥಿ ಸಿರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.