×
Ad

ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ: ರಾಮಲಿಂಗಾರೆಡ್ಡಿ

Update: 2017-11-27 20:50 IST

ಬೆಂಗಳೂರು, ನ. 27: ಧಾರವಾಡ ಜಿಲ್ಲೆ ಹೆಬ್ಬಳ್ಳಿ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಹಿಂದೆ ರಾಜ್ಯ ಸರಕಾರದ ಪಾತ್ರವಿಲ್ಲ. ಬಿಜೆಪಿ ನಾಯಕರು ಅನಗತ್ಯವಾಗಿ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದು, ಚುನಾವಣಾ ಸಮಯದಲ್ಲಿ ರಾಜಕೀಯ ಲಾಭ ಪಡೆಯಲು ವಿಫಲ ಯತ್ನ ನಡೆಸಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ದೂರಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೊಲೆ ಆರೋಪಿ ಬಸವರಾಜ ಮುತ್ತಗಿ ಹಾಗೂ ಕೊಲೆಯಾದ ಯೋಗೇಶ್ ಗೌಡ ನಡುವೆ ಜಮೀನು ವಿವಾದವಿದ್ದು, ಆ ಹಿನ್ನೆಲೆಯಲ್ಲಿ ಹತ್ಯೆ ನಡೆಸಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಈಗಾಗಲೇ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೂ ಬಿಜೆಪಿ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಡಿವೈಎಸ್ಪಿಯೊಬ್ಬರನ್ನು ಯೋಗೇಶ್ ಗೌಡ ಮನೆಗೆ ಕಳಿಸಿದ್ದಾರೆಂದು ಆರೋಪದಲ್ಲಿ ಯಾವುದೇ ಹುರುಳಿಲ್ಲ. ಚಾರ್ಜ್‌ಶೀಟ್ ಹಾಕುವಾಗ ಯಾರೂ ಏನು ಹೇಳಿಲ್ಲ. ಕೊಲೆಯಾದ ಯೋಗೇಶ್ ವಿರುದ್ಧ ಕೊಲೆ, ಕೊಲೆಯತ್ನ ಸೇರಿ 25 ಕೇಸುಗಳಿವೆ. ಅವರ ಸಹೋದರನ ವಿರುದ್ಧವೂ ಪ್ರಕರಣಗಳಿವೆ. ಇಬ್ಬರು ರೌಡಿ ಪಟ್ಟಿಯಲ್ಲಿದ್ದಾರೆ. ಆರೋಪಿ ಮುತ್ತಗಿ ಹಾಗೂ ಯೋಗೇಶ್ ನಡುವಿನ ವೈಯಕ್ತಿಕ ವಿಚಾರದ ಹತ್ಯೆ. ಆದರೆ ಬಿಜೆಪಿಯವರು ಚುನಾವಣೆ ಹಾಗೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿ ದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಂಸದೆ ಶೋಭಾ ಕರಂದ್ಲಾಜೆ ಬಿಜೆಪಿ ಕಾರ್ಯಕರ್ತರನ್ನು ರೌಡಿ ಪಟ್ಟಿಗೆ ಸೇರಿಸಲಾಗುತ್ತಿದೆ ಎಂಬ ಆರೋಪ ಶುದ್ಧ ಸುಳ್ಳು. ಯೋಗೇಶ್ ಗೌಡ ಹೆಸರು ರೌಡಿ ಪಟ್ಟಿಯಲ್ಲಿ ನಮ್ಮ ಸರಕಾರ ಆಡಳಿತಕ್ಕೆ ಬರುವ ಮೊದಲೇ ಇತ್ತು. ಆದರೂ, ನಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಟೀಕಿಸಿದರು.

'ವಾರಕ್ಕೊಂದು ಸುದ್ದಿಗೋಷ್ಠಿ'
ಬಿಜೆಪಿ ಮುಖಂಡರು ವಾರಕೊಮ್ಮೆ ಸುದ್ದಿಗೋಷ್ಠಿ ಮಾಡಬೇಕೆಂದು ಹೈಕಮಾಂಡ್ ಅವರಿಗೆ ಸೂಚಿಸಿದೆ. ಹೀಗಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಯೋಗೇಶ್ ಗೌಡ ಹತ್ಯೆ ಪ್ರರಕಣದಲ್ಲಿ ಕೆಂಪಯ್ಯ ಸೇರಿದಂತೆ ಯಾರೂ ಸಂಧಾನ ನಡೆಸಿಲ್ಲ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.
-ರಾಮಲಿಂಗಾರೆಡ್ಡಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News