×
Ad

ಪರಿಸರ ಮಾಲಿನ್ಯ ಅಪಾಯದ ಗಡಿ ಮೀರಿದೆ: ನಿಸಾರ್ ಅಹ್ಮದ್

Update: 2017-11-27 21:00 IST

ಬೆಂಗಳೂರು, ನ.27: ದೇಶದಲ್ಲಿ ಗಣಿಗಾರಿಕೆ, ವಾಯು, ಜಲ ಮಾಲಿನ್ಯ ಸೇರಿದಂತೆ ಇಡೀ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳು ಅಪಾಯದ ಗಡಿಯನ್ನು ಮೀರಿದೆ. ಇದು ಹೀಗೆಯೇ ಮುಂದುವರೆದರೆ ಮುಂದಿನ 50ವರ್ಷಗಳಲ್ಲಿ ಕರ್ನಾಟಕವು ಸೇರಿದಂತೆ ಬಹುತೇಕ ರಾಜ್ಯಗಳು ಮರುಭೂಮಿಯಾಗಿ ಪರಿವರ್ತನೆಗೊಳ್ಳಲಿವೆ ಎಂದು ಹಿರಿಯ ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್ ಆತಂಕ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಂಗಳೂರು ಜನಜಾಗೃತಿ ಸಾಮಾಜಿಕ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಬಳ್ಳಾರಿಯ ಸಂಡೂರು ಸುತ್ತಮುತ್ತಲು ನಡೆದಿರುವ ‘ಗಣಿಗಾರಿಕೆ ಕುರಿತ ಛಾಯಾಚಿತ್ರಗಳ ಪ್ರದರ್ಶನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಳ್ಳಾರಿಯ ಸಂಡೂರಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ದೃಶ್ಯಗಳನ್ನು ನೋಡಿದರೆ ‘ಭೂ ಮಾತೆ’ ರಕ್ತ ಕಾರಿಕೊಂಡು ರೋದಿಸುತ್ತಿದ್ದಾಳೆ ಅನಿಸುತ್ತಿದೆ. ಸ್ವಚ್ಛಂದವಾಗಿ ಹಚ್ಚ ಹಸಿರಿನಿಂದ ಕೂಡಿದ್ದ ಬೆಟ್ಟಗುಡ್ಡಗಳನ್ನು ನೆಲಸಮ ಮಾಡಲಾಗುತ್ತಿದೆ. ಗಣಿಗಾರಿಕೆಯ ನೆಪದಲ್ಲಿ ಭೂಮಿಯ ಮೇಲೆ ಅತ್ಯಾಚಾರವೇ ನಡೆಯುತ್ತಿದೆ ಎಂದರೆ ತಪ್ಪಾಗಲಾರದು ಎಂದು ಅವರು ವಿಷಾದಿಸಿದರು.

ಭೂಮಿಯ ಒಳಗಿರುವ ಶಿಲೆಗಳು ಹಾಗೂ ಅದಿರಿನ ಸಂಪತ್ತು ಕೋಟ್ಯಂತರ ವರ್ಷಗಳ ಉತ್ಪತ್ತಿಯ ಪ್ರತಿಫಲವಾಗಿದೆ. ಆದರೆ, ಆಧುನಿಕ ಮನುಷ್ಯನ ಸ್ವಾರ್ಥ ಬುದ್ಧಿಯಿಂದಾಗಿ ಕೆಲವೇ ವರ್ಷಗಳಲ್ಲಿ ಭೂಮಿಯ ಸಂಪತ್ತು ಬಗೆಯಲು ಪ್ರಾರಂಭಿಸಿದ್ದಾನೆ. ಇದರಿಂದ ಇಡೀ ಭೂ ಮಂಡಲವೇ ಅಪಾಯಕ್ಕೆ ಸಿಲುಕುವ ಅಪಾಯವಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು: ದೇಶವನ್ನು ಸರ್ವ ರೀತಿಯಿಂದಲೂ ಸಂರಕ್ಷಿಸುತ್ತೇವೆಂದು ಅಧಿಕಾರದ ಚುಕ್ಕಾಣಿ ಹಿಡಿಯುವ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ. ದೇಶದ ಇಡೀ ಪರಿಸರವೇ ಅಪಾಯದ ತುತ್ತುತುದಿ ತಲುಪಿದ್ದರೂ ಏನು ಆಗಿಲ್ಲವೆಂಬಂತೆ ನಿಶ್ಚಿತವಾಗಿದ್ದಾರೆ. ಈ ಕುರಿತು ಜನಪ್ರತಿನಿಧಿಗಳಿಗೆ ನಾಚಿಕೆ, ಮಾನ ಮರ್ಯಾದೆ ಇದ್ದಿದ್ದರೆ, ನಮ್ಮ ಸುತ್ತಮುತ್ತಲ ಪರಿಸರದ ಕುರಿತು ಕನಿಷ್ಠ ಮಟ್ಟದ ಕಾಳಜಿ ಆದರೂ ಇರುತ್ತಿತ್ತು ಎಂದು ಅವರು ಕಿಡಿಕಾರಿದರು.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್.ಆರ್.ಹಿರೇಮಠ್ ಮಾತನಾಡಿ, ಬಿಜೆಪಿ ಆಡಳಿತಾವಧಿಯಲ್ಲಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಉತ್ತುಂಗಕ್ಕೇರಿತ್ತು. ಅದನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು. ಅದಾದ ನಂತರ ಅಧಿಕಾರಕ್ಕೇರಿದ ಕಾಂಗ್ರೆಸ್ ನಾಯಕರು ಗಣಿಗಾರಿಕೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು. ಚಿತ್ರಕಲಾ ಪ್ರದರ್ಶನದಲ್ಲಿ ಛಾಯಾಗ್ರಾಹಕ ಸುಧೀರ್ ಶೆಟ್ಟಿ, ಹಿರಿಯ ವಕೀಲ ಬಾಲನ್ ಸೇರಿದಂತೆ ಮತ್ತಿತರರಿದ್ದರು.

'ಭ್ರಷ್ಟಾಚಾರದ ಆನೆಗೆ ಇರುವೆಗಳು ಮುತ್ತಿಕೊಳ್ಳಲಿ'
ನಮ್ಮ ಭ್ರಷ್ಟಾಚಾರದ ವ್ಯವಸ್ಥೆ ಆನೆಯಂತೆ ಬೃಹದಾಕಾರವಾಗಿದೆ. ಅದಕ್ಕೆ ಹೋರಾಟಗಾರನೆಂಬ ಒಂದು ಇರುವೆ ಕಚ್ಚಿದರೆ ಏನೂ ಆಗುವುದಿಲ್ಲ. ಆದರೆ, ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಅನ್ನುವ ಹಾಗೆ ಭ್ರಷ್ಟಾಚಾರದ ಆನೆಗೆ ಹೋರಾಟಗಾರರೆಂಬ ಸಾವಿರಾರು ಇರುವೆಗಳು ಮುತ್ತಿಕೊಂಡು ಭ್ರಷ್ಟಾಚಾರವನ್ನು ಸರ್ವನಾಶ ಮಾಡಬೇಕಿದೆ.
-ಕೆ.ಎಸ್.ನಿಸಾರ್ ಅಹ್ಮದ್, ಹಿರಿಯ ಸಾಹಿತಿ

ಪುರಾತತ್ವ ಇಲಾಖೆಗೆ ಸಂಬಂಧಿಸಿದ ದೇವಸ್ಥಾನಗಳು ಸೇರಿದಂತೆ ಪುರಾತನ ಕಟ್ಟಡಗಳ ಸುತ್ತ ಸುಮಾರು 2 ಕಿ.ಮೀ. ಒಳಗಡೆ ಯಾವುದೇ ರೀತಿಯ ಗಣಿಗಾರಿಕೆ ಮಾಡಬಾರದೆಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕಾನೂನು ಜಾರಿ ಮಾಡಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾನೂನನ್ನು ಸಡಿಲಗೊಳಿಸಿ 2ಕಿ.ಮೀ. ನಿಂದ 300ಮೀಟರ್‌ಗೆ ಇಳಿಸಿದ್ದಾರೆ. ಇದರಿಂದ ಸಂಡೂರಿನಲ್ಲಿರುವ ಕುಮಾರಸ್ವಾಮಿ ದೇವಸ್ಥಾನಕ್ಕೆ ಸಾಕಷ್ಟು ಹಾನಿಯಾಗುತ್ತಿದೆ.

-ಎಸ್.ಆರ್.ಹಿರೇಮಠ್ ಮುಖಂಡ, ಭ್ರಷ್ಟಾಚಾರ ವಿರೋಧಿ ವೇದಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News