×
Ad

ರವಿ ಬೆಳಗೆರೆ, ಅನಿಲ್‌ರಾಜ್ ಅರ್ಜಿ ವಿಚಾರಣೆ ನ.30ಕ್ಕೆ ಮುಂದೂಡಿಕೆ

Update: 2017-11-27 21:05 IST

ಬೆಂಗಳೂರು, ನ.27: ಶಾಸಕರ ವಿರುದ್ಧ ಮಾನಹಾನಿ ವರದಿ ಮಾಡಿದ್ದ ಆರೋಪದ ಮೇಲೆ ತಮಗೆ ಒಂದು ವರ್ಷ ಜೈಲು ಹಾಗೂ 10 ಸಾವಿರ ರೂ.ದಂಡ ವಿಧಿಸಿದ್ದ ವಿಧಾನಸಭೆ ಸ್ಪೀಕರ್ ಆದೇಶ ರದ್ದುಪಡಿಸುವಂತೆ ಕೋರಿ ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲ್‌ರಾಜ್ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ನ.30ರಂದು ವಿಚಾರಣೆ ನಡೆಸಲಿದೆ.

ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ವಿರುದ್ಧ ರವಿ ಬೆಳಗೆರೆ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಅನಿಲ್ ರಾಜ್ ಅವರು ಮಾನಹಾನಿ ವರದಿ ಮಾಡಿದ್ದರು ಎಂಬ ಆರೋಪ ಸಂಬಂಧ ವಿಧಾನಸಭೆ ಹಕ್ಕು ಬಾಧ್ಯತೆಗಳ ಸಮಿತಿ 2017ರ ಜೂನ್ 21ರಂದು ಈ ಇಬ್ಬರು ಪತ್ರಕರ್ತರಿಗೂ ತಲಾ ಒಂದು ವರ್ಷ ಜೈಲು ಹಾಗೂ 10 ಸಾವಿರ ರೂ.ದಂಡ ವಿಧಿಸಿತ್ತು. ಆದರೆ, ಈ ಆದೇಶ ಮರು ಪರಿಶೀಲಿಸಲು ಕೋರಿದ್ದ ಅರ್ಜಿಯನ್ನು ನ.21ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನಸಭೆ ಸ್ಪೀಕರ್ ತಿರಸ್ಕರಿಸಿ, ಶಿಕ್ಷೆ ವಿಧಿಸಿದ್ದ ಆದೇಶವನ್ನೇ ಖಾಯಂಗೊಳಿಸಿದ್ದರು.

ಈ ಆದೇಶ ರದ್ದುಕೋರಿ ರವಿ ಬೆಳಗೆರೆ ಮತ್ತು ಅನಿಲ್‌ರಾಜ್ ಸಲ್ಲಿಸಿರುವ ತಕರಾರು ಅರ್ಜಿ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಆದರೆ, ಅರ್ಜಿದಾರರ ಪರ ವಕೀಲ ಶಂಕರಪ್ಪ, ಅರ್ಜಿ ವಿಚಾರಣೆಯನ್ನು ನ.30ಕ್ಕೆ ಮುಂದೂಡಬೇಕು ಎಂದು ಕೋರಿದರು.

ಆ ಮನವಿಯನ್ನು ಪೀಠ ಪುರಸ್ಕರಿಸಿತು. ನ.30ರಂದು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News