ಕೈದಿಗಳ ಅಸಹಜ ಸಾವಿನ ಅಂಕಿ ಅಂಶ ಸಲ್ಲಿಸಲು ವಕೀಲರಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ನ.27: ರಾಜ್ಯದ ಜೈಲುಗಳಲ್ಲಿ 2012ರಿಂದ ಇಲ್ಲಿಯವರೆಗೂ ಅಸಹಜವಾಗಿ ಸಾವನ್ನಪ್ಪಿರುವ ಕೈದಿಗಳ ಅಂಕಿ ಅಂಶಗಳನ್ನು ಸಂಗ್ರಹಿಸಿ ಕೋರ್ಟ್‌ಗೆ ಸಲ್ಲಿಸಿ ಎಂದು ಅಮಿಕಸ್ ಕ್ಯೂರಿಯೂ(ಕೋರ್ಟ್‌ಗೆ ಸಹಕರಿಸುವ ವಕೀಲ) ಆದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ರಾಜ್ಯದ ಜೈಲುಗಳಲ್ಲಿ ವಿಚಾರಣಾಧೀನ ಹಾಗೂ ಸಜಾ ಬಂದಿಗಳು ಅಸಹಜವಾಗಿ ಸಾವನ್ನಪ್ಪಿರುವ ಕುರಿತ ವಿವರಗಳನ್ನು 2018ರ ಜನವರಿ 10ರೊಳಗೆ ಸಂಗ್ರಹಿಸಿ ಒದಗಿಸಿ ಎಂದು ನ್ಯಾಯಪೀಠ ಸೂಚಿಸಿದೆ.
ಸಾವನ್ನಪ್ಪಿರುವ ಕೈದಿಗಳ ವಾರಸುದಾರರಿಗೆ ನೀಡಿರುವ ಪರಿಹಾರ, ಅಸಹಜ ಸಾವುಗಳನ್ನು ತಡೆಯಲು ಕೈಗೊಂಡಿರುವ ಕ್ರಮ ಮತ್ತು ಕೈದಿಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಷ್ಟರಮಟ್ಟಿಗೆ ನಿಗಾ ವಹಿಸಲಾಗಿದೆ ಎಂಬುದನ್ನು ಗುರುತಿಸುವಂತೆ ನಿರ್ದೇಶಿಸಿದ ಅರ್ಜಿ ಇದಾಗಿದೆ.