×
Ad

ಶುಲ್ಕ ಪಾವತಿಸಿಕೊಂಡು ಪರೀಕ್ಷೆಗೆ ಅವಕಾಶ ಕಲ್ಪಿಸಿ

Update: 2017-11-27 21:35 IST

ಬೆಂಗಳೂರು, ನ.27: ಹೊಸರು ರಸ್ತೆಯಲ್ಲಿರುವ ಬಿಟಿಎಂ ಫಸ್ಟ್ ಗ್ರೇಡ್ ಕಾಲೇಜಿನ ಬಿ.ಕಾಂ.1ನೆ ಸೆಮಿಸ್ಟರ್ ಮತ್ತು 5ನೆ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಪಾವತಿಸಿಕೊಂಡು ನ.28ರಂದು ನಡೆಯುವ ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ ಹೈಕೋರ್ಟ್ ಸೂಚಿಸಿದೆ.

ಈ ಸಂಬಂಧ ಬಿಟಿಎಂ ಫಸ್ಟ್ ಗ್ರೇಡ್ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ದಿ ಶ್ರೀನಿವಾಸ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಬಿ.ವಿ.ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲೆ ಸುಮನ್ ಹೆಗ್ಡೆ ಅವರು, ಬೆಂಗಳೂರು ವಿಶ್ವವಿದ್ಯಾನಿಲಯವು ಯಾವುದೇ ಕಾರಣವನ್ನೂ ನೀಡದೆ ಬಿಟಿಎಂ ಫಸ್ಟ್ ಗ್ರೇಡ್ ಕಾಲೇಜಿನ ಬಿ.ಕಾಂ.1ನೆ ಸೆಮಿಸ್ಟರ್ ಮತ್ತು 5ನೆ ಸೆಮಿಸ್ಟರ್‌ನ 21 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಬಿಟಿಎಂ ಫಸ್ಟ್ ಗ್ರೇಡ್ ಕಾಲೇಜಿಗೆ 2006ರಲ್ಲಿ ಸರಕಾರದಿಂದ ಮಾನ್ಯತೆ ಸಿಕ್ಕಿದ್ದು, ಕಾಲೇಜಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆದರೂ ಬೆಂವಿವಿ ಯಾವುದೆ ಕಾರಣವನ್ನೂ ನೀಡದೆ ಬಿಟಿಎಂ ಫಸ್ಟ್‌ಗ್ರೇಡ್ ಕಾಲೇಜಿನ ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿಸಿಕೊಳ್ಳುತ್ತಿಲ್ಲ, ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಡಿ.28ರ ಗುರುವಾರದಿಂದ ಬಿ.ಕಾಂ.1ನೆ ಸೆಮಿಸ್ಟರ್ ಮತ್ತು 5ನೆ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಬೆಂವಿವಿ ರಿಜಿಸ್ಟ್ರಾರ್‌ಗೆ ಸೂಚಿಸಿ, ರಾಜ್ಯ ಸರಕಾರದ ಕಾರ್ಯದರ್ಶಿ, ಬೆಂವಿವಿ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿ ಮಾಡಲು ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News