×
Ad

ಪುನಶ್ಚೇತನಾ ಸಮಾವೇಶದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾದ ಮಕ್ಕಳ ಆಯೋಗದ ಅಧ್ಯಕ್ಷೆ

Update: 2017-11-27 22:07 IST

ಬೆಂಗಳೂರು, ನ.27: ಶಾಲೆಗಳ ಮೂಲಭೂತ ಸೌಲಭ್ಯಗಳು, ಮೀಸಲಾತಿಯಲ್ಲಿ ತಾರತಮ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಸೇರಿದಂತೆ ಮಕ್ಕಳು ಕೇಳಿದ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಲಾಗದೇ ಮಕ್ಕಳ ಆಯೋಗದ ಅಧ್ಯಕ್ಷೆ ಹಾಗೂ ಸದಸ್ಯರು ತಬ್ಬಿಬ್ಬಾದ ಪ್ರಸಂಗ ಇಂದಿಲ್ಲಿ ನಡೆಯಿತು.

ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಕ್ಲಬ್ ಒಕ್ಕೂಟವು ಬ್ರೆಡ್ಸ್ ಹಾಗೂ ಡಾನ್ ಬೋಸ್ಕೊ ಸಹಯೋಗದಲ್ಲಿ ಏರ್ಪಡಿಸಿದ್ದ ಪುನಶ್ಚೇತನಾ ಸಮಾವೇಶದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಅಧ್ಯಕ್ಷೆ ಕೃಪಾ ಆಳ್ವ ನೇತೃತ್ವದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.

ಯಾದಗಿರಿ ಜಿಲ್ಲೆ ಅನೇಕ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಶಾಲೆಗಳಲ್ಲಿ ವಿದ್ಯುತ್ ಸಮಸ್ಯೆಯಿದೆ. ಮಳೆ ಬಂದರೆ ಛಾವಣಿ ಸೋರುತ್ತಿದೆ ಎಂದು ಉತ್ತರ ಕರ್ನಾಟಕದ ಬಾಲಕಿಯೊಬ್ಬಳು ಪ್ರಶ್ನಿಸಿದರೆ, ಕಲಾಸಿಪಾಳ್ಯದ ಬಾಲ ಕಾರ್ಮಿಕರು ಹೆಚ್ಚಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೆಂಗಳೂರಿನ ಬಾಲಕನೊಬ್ಬ ತಿಳಿಸಿದ.

ಚಿತ್ರದುರ್ಗದಿಂದ ಬಂದಿದ್ದ ವಿದ್ಯಾರ್ಥಿ ಭರತೇಶ್, ಅನೇಕ ಕ್ಷೇತ್ರಗಳಲ್ಲಿ ದಲಿತರು ಹಾಗೂ ಹಿಂದುಳಿದವರಿಗೆ ಮೀಸಲಾತಿ ನೀಡಲಾಗಿದೆ. ಈ ಜಾತಿಗಳ ಜನರು ಬಡವರಾಗಿರುವುದರಿಂದ ಮೀಸಲಿನ ಅಗತ್ಯವಿರಬಹುದು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಂಕಗಳಲ್ಲೂ ವಿನಾಯಿತಿ ಏಕೆ? ಬುದ್ಧಿವಂತಿಕೆಗೆ ಮೀಸಲು ನೀಡಲು ಸಾಧ್ಯವೇ? ಇದರಿಂದ ಸಮಾನತೆ ಸಾಧಿಸಲು ಆಗುತ್ತದೆಯೇ? ಎಂದು ಪ್ರಶ್ನಿಸಿದ.

ಇಂತಹ ಪ್ರಶ್ನೆಯನ್ನು ನಿರೀಕ್ಷಿಸಿರದ ಕೃಪಾ ಆಳ್ವ ಹಾಗೂ ಸದಸ್ಯರು ಕಕ್ಕಾಬಿಕ್ಕಿಯಾದರು. ಬಳಿಕ ಉತ್ತರ ನೀಡಿದ ಸದಸ್ಯ ವೈ.ಮರಿಸ್ವಾಮಿ, ತಿಳಿವಳಿಕೆ ಎಂಬುದು ಯಾವುದೇ ಜಾತಿಗೆ ಸೀಮಿತವಾದುದಲ್ಲ. ಆದರೆ, ಸಮಾಜದಲ್ಲಿ ಇಂದಿಗೂ ಅಸಮಾನತೆ ಹಾಗೂ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲು-ಕೀಳು ಎಂಬ ಭಾವನೆ ಇದೆ. ಹೀಗಾಗಿ, ಸಮಾನತೆ ತರಲು ಕೆಲವುದಕ್ಕೆ ಮೀಸಲಾತಿ ಬೇಕಾಗಿದೆ ಎಂದರು.

ಇಷ್ಟಕ್ಕೆ ಸಮಾಧಾನಗೊಳ್ಳದ ಮಕ್ಕಳು, ಪರೀಕ್ಷೆಗಳ ಶುಲ್ಕಗಳಲ್ಲೂ ಮೀಸಲು ತರಲಾಗಿದೆ. ಸಮಾನತೆ ಕಾಪಾಡಬೇಕಾದ ನೀವೇ ಮೇಲು ಕೀಳು ಭಾವನೆಯನ್ನು ಬಿತ್ತುತ್ತಿದ್ದೀರಿ. ಎಲ್ಲರೂ ಸಮಾನರಾಗಿರಬೇಕು ಎಂದು ನೀವೇ ಹೇಳುತ್ತೀರಿ. ಆದರೆ ಸರಕಾರಕ್ಕೆ ಯಾವುದಾದರೂ ಅರ್ಜಿ ಸಲ್ಲಿಸುವಾಗ ಅದರಲ್ಲಿ ಜಾತಿ ಕಾಲಂ ಉಲ್ಲೇಖಿಸುವುದು ಏಕೆ? ಎಂದು ಪ್ರಶ್ನೆ ಮಾಡಿದರು.

ರಾಜ್ಯದ 10 ಜಿಲ್ಲೆಗಳಿಂದ ಆಯ್ಕೆಯಾಗಿದ್ದ ಸುಮಾರು 40 ಮಕ್ಕಳು ತಮಗಿರುವ ಹಕ್ಕಿಗಾಗಿ ತಾವೇ ಧ್ವನಿಯಾಗಿ ಹಕ್ಕೊತ್ತಾಯ ಮಾಡಿದರು. ಕೃಪಾ ಆಳ್ವಾ ಮಕ್ಕಳ ಪ್ರತಿಯೊಂದು ಪ್ರಶ್ನೆಯನ್ನು ತಾಳ್ಮೆಯಿಂದ ಕೇಳಿ ಕ್ರಮ ಕೈಗೊಳ್ಳುವೆ ಎಂದು ಮಕ್ಕಳಿಗೆ ಸ್ಪಷ್ಟವಾದ ಉತ್ತರ ನೀಡುತ್ತಿದ್ದರು. ಈ ವೇಳೆ ಚರ್ಚೆ ಮುಕ್ತಾಯವಾಗುವ ಸೂಚನೆ ಸಿಗದಿದ್ದರಿಂದ ಬೇರೆ ಪ್ರಶ್ನೆಗಳನ್ನು ಕೇಳುವಂತೆ ಕೃಪಾ ಆಳ್ವ ಸೂಚಿಸಿದರು.

ಸಹಾಯವಾಣಿ ಇಲ್ಲ: ಒಕ್ಕೂಟದಿಂದ ರಾಜ್ಯಾದ್ಯಂತ ಒಟ್ಟು 213 ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷೆ ವಿದ್ಯಾರ್ಥಿನಿ ಪ್ರೀತಿ ತಿಳಿಸಿದರು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಾಯಚೂರಿನ ವಿದ್ಯಾರ್ಥಿನಿ ಅಕ್ಷತಾ, ‘‘ಬಾಲ್ಯವಿವಾಹ ತಡೆಯಲು ಸಹಾಯವಾಣಿಗೆ (1098) ಕರೆ ಮಾಡಬಹುದು. ಆದರೆ ಜಿಲ್ಲೆಯಲ್ಲಿ ಸಹಾಯವಾಣಿಯೇ ಇಲ್ಲ. ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯುವ ಗ್ರಾಮಸಭೆಯಲ್ಲಿ ಹೇಳೋಣವೆಂದರೆ, ಅಲ್ಲಿ ಗ್ರಾಮಸಭೆಗಳೂ ನಡೆಯುತ್ತಿಲ್ಲ,’’ ಎಂದು ದೂರಿದಳು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು, ಆಯೋಗದ ದೂರವಾಣಿಗೆ ಕರೆ ಮಾಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸದಸ್ಯರಾದ ರೂಪಾ ನಾಯ್ಕ, ಚಂದ್ರಶೇಖರ್, ಬ್ರೆಡ್ಸ್ ನಿರ್ದೇಶಕ ಜಾಯ್ ನೆಡುಂಪರಂಬಿಲ್ ಉಪಸ್ಥಿತರಿದ್ದರು.

ಚನ್ನಪಟ್ಟಣದ ಗರ್ಲ್ಸ್ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ಮಾತನಾಡಿ, ನಮ್ಮ ಶಾಲೆಯಲ್ಲಿ ನೀಡುತ್ತಿರುವ ಬಿಸಿಯೂಟದಲ್ಲಿ ಹುಳುಗಳು ಕಾಣಸಿಗುತ್ತಿವೆ. ಕೆಲವು ಸಲ ಅನ್ನವನ್ನು ಅತಿಯಾಗಿ ಬೇಸಿಯಿಸುತ್ತಾರೆ ಎಂದು ದೂರಿದಳು. ಇದಕ್ಕೆ ಜೊತೆಯಾದ ಮತ್ತೊಬ್ಬ ವಿದ್ಯಾರ್ಥಿ ಈ ಯೋಜನೆ ಸರಿಯಾಗಿ ಇದೆ. ಆದರೆ, ಶಾಲೆಗಳಲ್ಲಿ ಅಡುಗೆ ಮಾಡುತ್ತಿರುವ ವಿಧಾನ ಸರಿಯಿಲ್ಲ. ಈ ಕುರಿತು ಸರಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News