ಫಾರ್ಮಾ ಕಂಪೆನಿಗಳ ಸಂಶೋಧನೆಗಳು ನಂಬಲರ್ಹವೇ...?

Update: 2017-11-28 14:45 GMT

ಇಂದು ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿ ಫಾರ್ಮಾ ಕಂಪೆನಿಗಳ ಒಡೆಯರ ಹೆಸರುಗಳು ಅಗ್ರಸ್ಥಾನದಲ್ಲಿವೆ. ಫಾರ್ಮಾ ಕಂಪೆನಿಗಳ ಒಡೆಯರ ಶ್ರೀಮಂತಿಕೆ ಮಾನವರ ದೇಹಗಳನ್ನು ಕಾಯಿಲೆಗಳ ಗುಡಾಣವಾಗಿಸಿ ಗಳಿಸಿರುವಂತಹದ್ದು. ಔಷಧಿಗಳೆಂದರೆ ಅವುಗಳು ಹಲವು ರಾಸಾಯನಿಕಗಳ ಮಿಶ್ರಣ. ನಿಜಕ್ಕೂ ಖಾಯಿಲೆಯಿದ್ದವರಿಗೆ ಔಷಧಿಗಳು ಜೀವರಕ್ಷಕಗಳಾಗಿದ್ದರೆ,  ಕಾಯಿಲೆಯೇ ಇಲ್ಲದವರ ಪಾಲಿಗೆ ಅವುಗಳು ಜೀವಭಕ್ಷಕಗಳು. ಹಾಗಾದರೆ ಕಾಯಿಲೆಯಿಲ್ಲದವರೂ ಔಷಧಿ ಸೇವಿಸುತ್ತಾರೆಯೇ ಎಂದು ನೀವು ಪ್ರಶ್ನಿಸಬಹುದು. ಹೌದು ಸೇವಿಸುತ್ತಾರೆ. ಅಂತಹ  ಪರಿಸ್ಥಿತಿಯನ್ನು ಔಷಧ ಕಂಪೆನಿಗಳು ಸೃಷ್ಟಿಸಿಬಿಟ್ಟಿವೆ.

ಇಂದು ಒಂದು ನಿದ್ರೆಯಲ್ಲಿ ಮಾಯವಾಗಿ ಬಿಡಬಹುದಾದಂತಹ ಸರಳ ತಲೆನೋವಿಗೂ ಕಿಲೋಗಟ್ಟಲೆ ನೋವುನಿವಾರಕ ಔಷಧಿ ಸೇವಿಸುವ ಅಭ್ಯಾಸ ನಮ್ಮಲ್ಲಿ ಬೆಳೆದು ಬಿಟ್ಟಿದೆ. ಇಂತಹ ಅಭ್ಯಾಸಗಳನ್ನು ಜನರಲ್ಲಿ ಬೆಳೆಸುವ ಕೆಲಸವನ್ನು ಫಾರ್ಮಾ ಕಂಪೆನಿಗಳು ಬಹಳ ವ್ಯವಸ್ಥಿತವಾಗಿ ಮಾಡುತ್ತಿವೆ. ಔಷಧಿ ಕಂಪೆನಿಗಳ  ಪ್ರತಿನಿಧಿಗಳು ಹಿಂದಿನಂತೆ  ಔಷಧಿಗಳ ಪರಿಚಯ ಮತ್ತು ಪ್ರಚಾರ ಮಾಡುವುದಲ್ಲ. ಬದಲಾಗಿ ವೈದ್ಯರಿಗೆ ಜನಮಾನಸದಲ್ಲಿ ಕಾಯಿಲೆಗಳ ಫೋಬಿಯಾ ಹುಟ್ಟಿಸಲು ತರಬೇತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಔಷಧಿ ಕಂಪೆನಿಗಳು ಜನರಲ್ಲಿ ಕಾಯಿಲೆಗಳ ಫೋಬಿಯಾ ಹುಟ್ಟಿಸಿ ತಮ್ಮ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳುತ್ತಿವೆ. ಫಾರ್ಮಾ ಕಂಪೆನಿಗಳ ಇಂತಹ ಮೋಸದಿಂದಾಗಿ ಜನರು ತಮ್ಮ ಹೊಟ್ಟೆಯನ್ನು ಔಷಧಿಗಳನ್ನು ತುಂಬಿಸುವ ತೊಟ್ಟಿಯಾಗಿಸುತ್ತಿದ್ದಾರೆ. ಇದಕ್ಕಾಗಿಯೇ ಖೊಟ್ಟಿ ಸಂಶೋಧನೆಗಳ ಪರಿಣತರನ್ನು ಫಾರ್ಮಾ ಕಂಪೆನಿಗಳೇ ಸೃಷ್ಟಿಸುತ್ತವೆ.

ಕೆಲವು ಉದಾಹರಣೆ ನೋಡಿ. ನಾನು ( ಲೇಖಕ) ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದ ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿ ರಕ್ತದ ಕೊಲೆಸ್ಟರಾಲ್ ನ ನಾರ್ಮಲ್ ಮಿತಿ 200 ರಿಂದ 300 ಮಿ.ಗ್ರಾಂ/ ಡೆಸಿ ಲೀಟರ್ ಎಂದು ಪ್ರಯೋಗಾಲಯಗಳು ರಿಪೋರ್ಟ್ ನೀಡುತ್ತಿತ್ತು. ಮತ್ತು ಪಠ್ಯದಲ್ಲಿಯೂ  ಅದೇ ವ್ಯಾಲ್ಯೂ ಇತ್ತು. ಇಂದೂ ಅನೇಕ ವೈದ್ಯಕೀಯದ ಪಠ್ಯಪುಸ್ತಕಗಳಲ್ಲಿ ಅದೇ ವ್ಯಾಲ್ಯೂ ಇದೆ. ನಾನು ವೈದ್ಯಕೀಯ ಪ್ರಯೋಗಾಲಯ ಪ್ರಾರಂಭಿಸುವ ಕಾಲಕ್ಕೆ ಅದೇ ಕೊಲೆಸ್ಟರಾಲ್ ನ ನಾರ್ಮಲ್ ಮಿತಿ 200-250 ಗೆ ಇಳಿಯಿತು. ಕಳೆದ ಐದಾರು ವರ್ಷಗಳಿಂದೀಚೆಗೆ ಅದನ್ನು 125-200 ಕ್ಕೆ ಇಳಿಸಲಾಗಿದೆ. ಹೀಗೆ ನಾರ್ಮಲ್ ಮಿತಿ ಇಳಿಯುತ್ತಾ ಬಂದಂತೆ ಕೊಲೆಸ್ಟರಾಲ್ ರೋಗಿಗಳ ಸಂಖ್ಯೆ ಏರಿಕೆಯಾಯಿತೆಂದೇ ಅರ್ಥ. ರೋಗಿಗಳ ಸಂಖ್ಯೆ ವೃದ್ಧಿಯಾದರೆ ಔಷಧಿ  ಮಾರಾಟವೂ ವೃದ್ಧಿಯಾಗುತ್ತದೆ.

ಇನ್ನೂ ಸ್ವಲ್ಪ ಕಾಲ ಕಳೆದರೆ ಕೊಲೆಸ್ಟರಾಲ್ ನ ನಾರ್ಮಲ್ ಮಿತಿಯು 100-150ಕ್ಕೆ ಇಳಿದರೆ ಆಶ್ಚರ್ಯವೇನಿಲ್ಲ. ಆಗ ಮಾನವಕುಲದಲ್ಲಿ ಐವತ್ತು ಶೇಕಡಾ ಮಂದಿಗಾದರೂ  ಕೊಲೆಸ್ಟರಾಲ್ ಎಂಬ ಕಾಯಿಲೆಯಿರುತ್ತದೆ. ಔಷಧಿ ಮಾರುಕಟ್ಟೆ ಇನ್ನೂ ವೃದ್ಧಿಸುತ್ತದೆ. ಕೊಲೆಸ್ಟರಾಲ್ ಏರಿದರೆ ಕೇವಲ ಕೊಲೆಸ್ಟರಾಲ್ ಗೆ ಮಾತ್ರ ಔಷಧಿ ನೀಡುವುದಲ್ಲ. ಕೊಲೆಸ್ಟರಾಲ್ ನ ಔಷಧಿ ಜೊತೆ ಜೊತೆಗೆ ರಕ್ತ ತೆಳುವಾಗಿಸುವ ಔಷಧಿಯನ್ನೂ ನೀಡಲಾಗುತ್ತದೆ. ಕೊಲೆಸ್ಟರಾಲ್ ನ ಔಷಧಿ ತಯಾರಿಸುವ ಹೆಚ್ಚಿನೆಲ್ಲಾ ಕಂಪೆನಿಗಳು ರಕ್ತ ತೆಳುವಾಗಿಸುವ ಔಷಧಿಗಳನ್ನೂ ತಯಾರಿಸುತ್ತವೆ.ಈ ರೀತಿಯಲ್ಲಿ ಔಷಧಿ ಕಂಪೆನಿಗಳು ತಮ್ಮ ಜಾಲವನ್ನು ಹರಡಿ ಮತ್ತಷ್ಟು ಶ್ರೀಮಂತವಾಗುತ್ತದೆ.

ಯಾವುದೇ ಪ್ರಯೋಗಾಲಯಗಳು ತಾವು ಮಾಡುವ ಪರೀಕ್ಷೆಗಳ ನಾರ್ಮಲ್‌ ಮಿತಿಯನ್ನು ನಿರ್ಧರಿಸಲು  ಸಾಧ್ಯವಾಗುವುದಿಲ್ಲ. ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಬಳಸುವ ಲ್ಯಾಬ್ ರಿಯೇಜಂಟ್ ಗಳನ್ನು(ಪ್ರಯೋಗ ದ್ರಾವಣಗಳು) ತಯಾರಿಸುವ ಕಂಪೆನಿಗಳು ನಾರ್ಮಲ್ ಮಿತಿಯನ್ನು ತಮ್ಮ ದ್ರಾವಣಗಳ‌ ಪೊಟ್ಟಣಗಳೊಂದಿಗೆ ನೀಡುವ ಮಾಹಿತಿಪತ್ರದಲ್ಲಿ ನಮೂದಿಸುತ್ತವೆ. ಪ್ರಯೋಗಾಲಯ ತಂತ್ರಜ್ಞರು, ವೈದ್ಯರು ವ್ಯವಸ್ಥೆಯ ಕೈಗೊಂಬೆಗಳಾಗಿರುತ್ತಾರೆ.  ಒಂದು ವೇಳೆ ಯಾವುದಾದರೊಂದು ಪ್ರಯೋಗಾಲಯವು ನೀಡುವ ರಿಪೋರ್ಟ್ ನಲ್ಲಿ ಕೊಲೆಸ್ಟರಾಲ್ ನ ನಾರ್ಮಲ್ ಮಿತಿ 200 ರಿಂದ 300 ಮಿ.ಗ್ರಾಮ್/ ಡೆಸಿ ಲೀಟರ್ ಎಂದು ನಮೂದಿಸಿದರೆ ಅದನ್ನು ವೈದ್ಯ ಕಸದ ಬುಟ್ಟಿಗೆಸೆಯುತ್ತಾನಷ್ಟೆ. ಯಾಕೆಂದರೆ ಅದು ವೈದ್ಯ ಜಗತ್ತಿನ ಪ್ರಕಾರ ಅಪ್ಡೇಟ್ ಆಗದ ರಿಪೋರ್ಟ್ ಎಂದೆನಿಸಿಬಿಡುತ್ತದೆ. ಯಾವುದೇ ಪ್ರಯೋಗಾಲಯವು ವೈದ್ಯರ ಬೆಂಬಲವಿಲ್ಲದೇ ನಡೆಯದು. 

ಔಷಧ ತಯಾರಕ ಕಂಪೆನಿಗಳು ಮತ್ತು ಲ್ಯಾಬ್ ರಿಯೇಜಂಟ್ ತಯಾರಿಸುವ ಕಂಪೆನಿಗಳ ಮಧ್ಯೆ ಅಲಿಖಿತ ಒಪ್ಪಂದವಿರುತ್ತದೆ. ಮಾತ್ರವಲ್ಲದೇ ಎಷ್ಟೋ ಔಷಧಿ ಕಂಪೆನಿಗಳೂ ಸ್ವತಃ ಲ್ಯಾಬ್ ರಿಯೇಜಂಟ್ ತಯಾರಿಸುವ ಕಂಪೆನಿಗಳನ್ನೂ ಹೊಂದಿರುತ್ತವೆ.

ರಕ್ತದ ಯೂರಿಕ್ ಆಸಿಡ್ ನಾರ್ಮಲ್ ಮಿತಿ 7.2 ಮಿ.ಗ್ರಾಂ/ಡೆಸಿ ಲೀಟರ್ ಎಂದು ಹೆಚ್ಚಿನೆಲ್ಲಾ ಪ್ರಯೋಗಾಲಯಗಳು ತಮ್ಮ ರಿಪೋರ್ಟ್ ನಲ್ಲಿ ನಮೂದಿಸುತ್ತವೆ. ಅದಾಗ್ಯೂ ಇಂದು ಕೆಲವು ವೈದ್ಯರು ಯೂರಿಕ್ ಆಸಿಡ್ 6.0 ಮಿ.ಗ್ರಾಂ/ ಡೆಸಿ ಲೀಟರ್ ಗಿಂತ ಏರಿಬಿಟ್ಟರೆ ಅದನ್ನು ಅತಿ ಯೂರಿಕ್ ಆಸಿಡ್ ಎಂದು ಪರಿಗಣಿಸಿ ಆತನಿಗೆ ಔಷಧಿ ಪ್ರಾರಂಭಿಸುತ್ತಾರೆ. ಇನ್ನು ಸ್ವಲ್ಪ ಕಾಲದಲ್ಲಿ ಇದನ್ನೂ ಔಷಧಿ ತಯಾರಕ ಮತ್ತು ಲ್ಯಾಬ್ ರಿಯೇಜಂಟ್ ತಯಾರಕ ಕಂಪೆನಿಗಳು ಅಧಿಕೃತವಾಗಿ ಇಳಿಸಿ 6.0 ವರೆಗೆ ಮಾತ್ರ ನಾರ್ಮಲ್ ಎಂದು ನಿರ್ಧರಿಸಿದರೆ ಆಶ್ಚರ್ಯವಿಲ್ಲ.

ಇಂದು CME (continuing medical education) ಎಂದು ಕರೆಯಲಾಗುವ ವೈದ್ಯರನ್ನು ಅಪ್ಡೇಟ್ ಮಾಡುವ ಶಿಬಿರಗಳನ್ನು ಔಷಧ ಕಂಪೆನಿಗಳೇ ಆಯೋಜಿಸುತ್ತವೆ. ಆ ಶಿಬಿರಗಳನ್ನು ಕಂಪೆನಿಗಳು ಆಯೋಜಿಸುವ ಉದ್ದೇಶಗಳು ಬಹಳ ಸ್ಪಷ್ಟ. ಅಲ್ಲಿ ಕಂಪೆನಿಗಳ ಪ್ರಾಯೋಜಿತ ಸಂಶೋಧಕರು ಮಂಡಿಸುವ ಪ್ರಬಂಧಗಳು ಕಂಪೆನಿಯ ಹಿತ ಕಾಯುವ ಕೆಲಸ ಮಾಡುತ್ತದೆ. ಇಂತಹ ಔಷಧ ಕಂಪೆನಿ ಪ್ರಾಯೋಜಿತ ಶಿಬಿರಗಳಲ್ಲಿ ಮಂಡಿಸಲಾಗುವ ಪ್ರಬಂಧಗಳನ್ನೇ ಸಂಶೋಧನಾ ಪ್ರಬಂಧಗಳೆಂದು ಹೇಳಿ ಮುಂದೆ ವೈದ್ಯರು ತಮ್ಮ ವೃತ್ತಿಯಲ್ಲಿ ಕಂಪೆನಿ ನಿರ್ದೇಶಿಸಿದಂತೆ ಅಪ್ಡೇಟ್ ಆಗಿಬಿಡುತ್ತಾರೆ. ಈ ರೀತಿಯ ಕಂಪೆನಿ ಕೃಪಾಪೋಷಿತ ಸಂಶೋಧನಾ ವರದಿಗಳನ್ನು ಹೇಗೆ ನಂಬಲು ಸಾಧ್ಯ?

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News