ನ್ಯಾಯಾಲಯದಲ್ಲೇ ವಿಷಪ್ರಾಶನಗೈದು ಆತ್ಮಹತ್ಯೆಗೈದ ಬೋಸ್ನಿಯಾ ಯುದ್ಧಾಪರಾಧಿ

Update: 2017-11-30 15:59 GMT

ಹೇಗ್, ನ.30: ನೆದರ್‌ಲ್ಯಾಂಡಿನ ರಾಜಧಾನಿ ಹೇಗ್ ಇಲ್ಲಿನ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಯುದ್ಧಾಪರಾಧ ವಿಚಾರಣಾ ನ್ಯಾಯಾಲಯವು ಬೋಸ್ನಿಯಾದ ಕ್ರೂಯೆಶಿಯ ನಾಯಕ ಸ್ಲೊಬೊದನ್ ಪ್ರಲ್ಜಕ್ (72) ಎಂಬಾತನನ್ನು ಯುದ್ಧಾಪರಾಧ ಪ್ರಕರಣದ ದೋಷಿಯೆಂದು ಘೋಷಿಸುತ್ತಿದ್ದಂತೆಯೇ ನ್ಯಾಯಾಲಯದಲ್ಲಿಯೇ ಎಲ್ಲರೆದುರೇ ಪ್ಲಾಸ್ಟಿಕ್ ಕಪ್ ಒಂದರಲ್ಲಿದ್ದ ವಿಷಕಾರಿ ದ್ರಾವಣವೊಂದನ್ನು ಕುಡಿದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನ್ಯಾಯಾಲಯ ಪ್ರಲ್ಜಕ್ಗೆ 29 ವರ್ಷಗಳ ಜೈಲು ಶಿಕ್ಷೆ ಘೋಷಿಸಿದಾಗ ಆತ ತಾನು ಯುದ್ಧಾಪರಾಧಿ ಅಲ್ಲ ಎಂದು ಕೂಗಿಕೊಂಡು ವಿಷ ಕುಡಿದಿದ್ದ. ಆತನನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆತ ಅಲ್ಲಿ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ. ವಿಷದ ದ್ರಾವಣವನ್ನು ಕುಡಿಯುವ ಮುನ್ನ ಆತ ‘‘ನಾನು ನಿಮ್ಮ ತೀರ್ಪನ್ನು ತಿರಸ್ಕರಿಸುತ್ತೇನೆ’’ ಎಂದಿದ್ದಾನೆ. ಈ ವಿಚಾರಣೆ ನೇರ ಪ್ರಸಾರವಾಗುತ್ತಿತ್ತು

ವೃತ್ತಿಯಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದ ಪ್ರಲ್ಜಕ್ ನಂತರ ಝಗ್ರೆಬ್ ಎಂಬಲ್ಲಿನ ಫಿಲ್ಮ್ ಅಕಾಡಮಿಯಲ್ಲಿ ಪದವಿ ಪಡೆದು ಟೆಲಿವಿಷನ್ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ, ಪ್ರಲ್ಜಕ್ ಹಾಗೂ ಇತರ ಐವರು ಬೋಸ್ನಿಯಾದ ಕುರೇಶಿಯನ್ನರು ಈ ಹಿಂದೆ 1990ರ ಯುದ್ಧದ ಸಂದರ್ಭ ಬೋಸ್ನಿಯಾದ ಸ್ವಘೋಷಿತ ಕುರೇಶಿಯಾ ರಾಜ್ಯದ ನಾಯಕರೆನಿಸಿಕೊಂಡಿದ್ದರಲ್ಲದೆ, ಯುದ್ಧಾಪರಾಧ ನಡೆಸಿದ ಆರೋಪ ಕೂಡ ಹೊತ್ತಿದ್ದರು. ಅವರೆಲ್ಲರಿಗೂ 10ರಿಂದ 25 ವರ್ಷ ಅವಧಿಯ ಜೈಲು ಶಿಕ್ಷೆ ವಿಧಿಸಲಾಗಿದೆ. ಮಾಜಿ ಯುಗೊಸ್ಲಾವ್ ಗಣರಾಜ್ಯದಲ್ಲಿ ಮೂರು ಪಂಗಡಗಳ ನಡುವೆ ನಡೆದ ಸಂಘರ್ಷದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಅಂತಿಮವಾಗಿ ಈ ಸಂಘರ್ಷ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಒಪ್ಪಂದದ ನಂತರ 1995ರಲ್ಲಿ ಅಂತ್ಯಗೊಂಡಿತ್ತು.

ಈ ಆರು ಮಂದಿಯ ವಿರುದ್ಧ ಮೊದಲ ತೀರ್ಪು 2013ರಲ್ಲಿ ಬಂದಿತ್ತು. ನಾಗರಿಕರನ್ನು ಹತ್ಯೆಗೈದ, ಬೋಸ್ನಿಯಾದ ಮುಸ್ಲಿಮರನ್ನು ಬೆದರಿಸಿದ ಹಾಗೂ ಬಲವಂತವಾಗಿ ನಾಗರಿಕರನ್ನು ಬೇರೆಡೆಗೆ ಸ್ಥಳಾಂತರಿಸಿದ ಆರೋಪ ಅವರ ಮೇಲಿದೆ.

ಬೋಸ್ನಿಯ ಯುದ್ಧದಲ್ಲಿ 1 ಲಕ್ಷ ಸಾವು

1992ರಿಂದ 1995ರವರೆಗೆ ನಡೆದ ಬೋಸ್ನಿಯ ಯುದ್ಧದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 22 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.

ಈ ಯುದ್ಧದಲ್ಲಿ ಬೋಸ್ನಿಯ ಮುಸ್ಲಿಮರು ಮತ್ತು ಬೋಸ್ನಿಯ ಸರ್ಬರು ಪರಸ್ಪರರ ವಿರುದ್ಧ ಹೋರಾಡಿದರು.

ಆರಂಭದಲ್ಲಿ ಬೋಸ್ನಿಯ ಮುಸ್ಲಿಮರು ಮತ್ತು ಬೋಸ್ನಿಯ ಕ್ರೋಟರ ನಡುವೆ ಮೈತ್ರಿ ಏರ್ಪಟ್ಟಿತ್ತಾದರೂ, ಬಳಿಕ ಅದು ಮುರಿದು ಬಿತ್ತು ಹಾಗೂ ಈ ಎರಡು ಗುಂಪುಗಳೂ ಪರಸ್ಪರರ ವಿರುದ್ಧ ಹೋರಾಡಿದವು.

ಈ ಯುದ್ಧದಲ್ಲಿ ನಡೆಯಿತೆನ್ನಲಾದ ಯುದ್ಧಾಪರಾಧಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ವಿಶ್ವಸಂಸ್ಥೆಯು 1995ರಲ್ಲಿ ಮಾಜಿ ಯುಗೋಸ್ಲಾವಿಯಕ್ಕಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿ (ಐಸಿಟಿವೈ)ಯನ್ನು ರಚಿಸಿತು. ಎರಡು ದಶಕಗಳಿಗೂ ಅಧಿಕ ಅವಧಿ ವಿಚಾರಣೆ ನಡೆಸಿದ ನ್ಯಾಯಮಂಡಳಿಯು ಮುಂದಿನ ತಿಂಗಳು ತನ್ನ ಕೆಲಸವನ್ನು ಪೂರ್ಣಗೊಳಿಸಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News