2ನೆ ತ್ರೈಮಾಸಿಕ ಅವಧಿಯಲ್ಲಿ ಶೇ.6.3ಕ್ಕೇರಿದ ಜಿಡಿಪಿ ದರ

Update: 2017-11-30 14:34 GMT

ಹೊಸದಿಲ್ಲಿ, ನ.30: ಜುಲೈನಿಂದ ಸೆಪ್ಟೆಂಬರ್‌ವರೆಗಿನ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ(ಒಟ್ಟು ಸ್ಥಳೀಯ ಉತ್ಪಾದನೆ) ಅಭಿವೃದ್ಧಿ ದರ ಶೇ.6.3 ಆಗಿದೆ ಎಂದು ಸರಕಾರದ ಅಂಕಿಅಂಶ ತಿಳಿಸಿದೆ. ಇದರೊಂದಿಗೆ ಕಳೆದ ಐದು ತ್ರೈಮಾಸಿಕ ಅವಧಿಯಲ್ಲಿ ನಿರಂತರ ಕುಸಿಯುತ್ತಾ ಸಾಗಿದ್ದ ಜಿಡಿಪಿ ಸ್ವಲ್ಪಮಟ್ಟಿನ ಚೇತರಿಕೆ ಕಂಡಂತಾಗಿದೆ.

    ಕಳೆದ ಎಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ ಶೇ.5.7ಕ್ಕೆ ಕುಸಿದಿದ್ದು ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕನಿಷ್ಟವಾಗಿತ್ತು. ಆದರೆ ನೋಟು ರದ್ದತಿ ಹಾಗೂ ಜಿಎಸ್‌ಟಿ ಜಾರಿಯ ಬಳಿಕ ಕುಂಠಿತಗೊಂಡಿದ್ದ ವ್ಯವಹಾರ ಇದೀಗ ಮತ್ತೆ ಚೇತರಿಕೆಯ ಹಾದಿಯಲ್ಲಿರುವುದು ಜಿಡಿಪಿ ದರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಅರ್ಥವ್ಯವಸ್ಥೆಯ ಜಿವಿಎ(ಗ್ರಾಸ್ ವ್ಯಾಲ್ಯೂ ಆ್ಯಡೆಡ್)ಯಲ್ಲೂ ಚೇತರಿಕೆ ದಾಖಲಾಗಿದ್ದು ಶೇ.6.1ಕ್ಕೆ ತಲುಪಿದ್ದು ಕಳೆದ ತ್ರೈಮಾಸಿಕದಲ್ಲಿ ಶೇ.5.6 ಆಗಿತ್ತು. ಜಿಡಿಪಿ ದರ ಶೇ.6.4ಕ್ಕೆ ತಲುಪಬಹುದು ಎಂದು ರಾಯ್ಟರ್ಸ್ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದರೆ, ಇನ್ನು ಕೆಲವು ಆರ್ಥಿಕ ತಜ್ಞರು ಶೇ.5.9ರಿಂದ ಶೇ.7.1ರಷ್ಟಾಗಬಹುದು ಎಂದು ಅಂದಾಜಿಸಿದ್ದರು.

   ಜಿಡಿಪಿ ದರ ನಾವು ನಿರೀಕ್ಷಿಸಿದ ಮೊತ್ತದಷ್ಟೇ ಹೆಚ್ಚಳವಾಗಿದೆ. ಕಾರ್ಪೊರೇಟ್ ಕ್ಷೇತ್ರ ಚೇತರಿಸಿಕೊಂಡಿರುವುದು ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಿದೆ. ವಾರ್ಷಿಕ ಜಿಡಿಪಿ ದರ ಇನ್ನು ಶೇ.6.5ರಲ್ಲಿ ಸ್ಥಿರಗೊಳ್ಳುವ ನಿರೀಕ್ಷೆಯಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಿರಿಯ ಅರ್ಥಶಾಸ್ತ್ರಜ್ಞ ತುಷಾರ್ ಅರೋರ ತಿಳಿಸಿದ್ದಾರೆ.

ಅಭಿವೃದ್ಧಿಯ ಲಕ್ಷಣಗಳು ಗೋಚರಿಸುತ್ತಿದ್ದು ಜಿಡಿಪಿ ದರ ಶೇ.7ಕ್ಕೆ ತಲುಪಬಹುದು ಎಂದು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಕಳೆದ ತಿಂಗಳು ಹೇಳಿದ್ದರು. ಕಳೆದ ಕೆಲ ತಿಂಗಳಲ್ಲಿ ಪ್ರಯಾಣಿಕರ ವಾಹನ, ಟ್ರಾಕ್ಟರ್ ಕ್ಷೇತ್ರ, ಕೈಗಾರಿಕಾ ಉದ್ಯಮ, ವಿದ್ಯುಚ್ಚಕ್ತಿ ಉತ್ಪಾದನೆ, ರೈಲು ಸರಕು ಮುಂತಾದ ಕ್ಷೇತ್ರದಲ್ಲಿ ಚಟುವಟಿಕೆ ತೀವ್ರಗೊಂಡಿದ್ದು ಬೃಹತ್ ಕಂಪೆನಿಗಳೂ ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಉತ್ಪಾದನೆ ತೀವ್ರಗೊಳಿಸಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಭಾರತೀಯ ಸಂಸ್ಥೆಗಳ ಒಟ್ಟು ಲಾಭ ಶೇ.25ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದ್ದು, ಇದು ಏಶ್ಯಾದಲ್ಲೇ ಅತ್ಯಧಿಕವಾಗಿದೆ ಎಂದು ‘ಥಾಮ್ಸನ್ ರಾಯ್ಟರ್ಸ್’ ಅಂಕಿಅಂಶ ತಿಳಿಸಿದೆ.

  ಅರ್ಥವ್ಯವಸ್ಥೆಯು ಮರಳಿ ಹಳಿಗೆ ಬರುವ ಪ್ರಕ್ರಿಯೆಯಲ್ಲಿದ್ದರೂ ಖಾಸಗಿ ಹೂಡಿಕೆ ಕ್ಷೇತ್ರ ಹಾಗೂ ಬಳಕೆದಾರರ ಕ್ಷೇತ್ರ ಇನ್ನೂ ಚೇತರಿಸಿಕೊಂಡಿಲ್ಲ. ಅಲ್ಲದೆ ಜಾಗತಿಕವಾಗಿ ತೈಲೋತ್ಪನ್ನ ಬೆಲೆ ಏರಿಕೆ ಗ್ರಾಹಕರಿಗೆ ಬಿಸಿಮುಟ್ಟಿಸಿದ್ದು ಹಣದುಬ್ಬರ ಅಧಿಕವಾಗಲು ಕಾರಣವಾಗಿದೆ. ಇದರಿಂದ 2018ರ ದ್ವಿತೀಯಾರ್ಧದಲ್ಲಿ ಆರ್‌ಬಿಐ ತೈಲ ದರಗಳನ್ನು ಹೆಚ್ಚಿಸುವ ಅನಿವಾರ್ಯತೆಗೆ ಸಿಲುಕಲಿದೆ ಮತ್ತು ಅಭಿವೃದ್ಧಿಯ ವೇಗಕ್ಕೆ ಇದು ತೊಡಕಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

   2017ರ ಅಕ್ಟೋಬರ್‌ನಲ್ಲಿ ಪ್ರಮುಖ 8 ಕೈಗಾರಿಕೆಗಳ ಸೂಚ್ಯಂಕ , ಕಳೆದ ವರ್ಷದ ಇದೇ ಅವಧಿಗಿಂತ ಶೇ.4.7ರಷ್ಟು ಹೆಚ್ಚಳ ದಾಖಲಿಸಿದೆ ಎಂದು ಗುರುವಾರ ಬಿಡುಗಡೆ ಮಾಡಿರುವ ಇನ್ನೊಂದು ಅಂಕಿಅಂಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News