ಡಾ.ಬರ್ನಾಡ್ ಮೊರಾಸ್ ರಾಜೀನಾಮೆಗೆ ಆಗ್ರಹಿಸಿ ಡಿ.3 ರಂದು ಧರಣಿ
ಬೆಂಗಳೂರು, ಡಿ.1: ನಗರದ ಕಥೋಲಿಕ್ ಚರ್ಚ್‌ನ ಧರ್ಮಾಧ್ಯಕ್ಷರಾಗಿ ಮುಂದುವರಿದಿರುವ ಡಾ.ಬರ್ನಾಡ್ ಮೊರಾಸ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಡಿ.3 ರಂದು ನಗರದ ಪುರಭವನದ ಎದುರು ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘದ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಫಾಯಲ್ ರಾಜ್, ಬೆಂಗಳೂರಿನ ಧರ್ಮಾಧ್ಯಕ್ಷರಾಗಿ ಮೊರಾಸ್ 75 ನೆ ವರ್ಷಕ್ಕೆ ಅಧಿಕೃತವಾಗಿ ಧರ್ಮಾಧ್ಯಕ್ಷರ ಪೀಠದಿಂದ ನಿರ್ಗಮಿಸಿದ್ದರೂ, ಕಳೆದ ಎರಡು ವರ್ಷಗಳಿಂದ ಅಕ್ರಮವಾಗಿ ಇದೇ ಪೀಠದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೈಬಲ್ ನಿಯಮಗಳ ಪ್ರಕಾರ 75 ವರ್ಷಗಳ ನಂತರ ಧರ್ಮಾಧ್ಯಕ್ಷರಾಗಲು ಅನರ್ಹರಾಗಿರುತ್ತಾರೆ. ಹೀಗಿದ್ದರೂ, ಮೊರಾಸ್ 78 ವರ್ಷಗಳಾಗಿದ್ದರೂ ಅಧಿಕಾರ ಆಸೆಗಾಗಿ ಪೀಠವನ್ನು ಬಿಟ್ಟುಕೊಡಲು ಮುಂದಾಗಿಲ್ಲ. ಅಲ್ಲದೆ, ಅನ್ಯಭಾಷೆಗಳಾದ ತಮಿಳು, ಮಲಯಾಳಿ, ಕೊಂಕಣಿ ಭಾಷೆಗಳನ್ನು ಕನ್ನಡಿಗರ ಮೇಲೆ ಹೇರುವ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇತರರನ್ನು ಕನ್ನಡಿಗರ ಮೇಲೆ ಎತ್ತಿ ಕಟ್ಟಿ ದ್ವೇಷ ಹರಡುತ್ತಿದ್ದಾರೆ ಎಂದು ಆಪಾದಿಸಿದರು.
ಚರ್ಚ್‌ಗಳಲ್ಲಿ ಹುಂಡಿಗೆ ಹಾಕಿದ, ದೇಣಿಗೆ ನೀಡಿದ ಹಣಕ್ಕೆ ಲೆಕ್ಕ ನೀಡುತ್ತಿಲ್ಲ. ಜೊತೆಗೆ, ಜಂಟಿ ಖಾತೆ ನಿರ್ವಹಿಸುವ ಮೂಲಕ ಇಲ್ಲಿನ ಹಣವನ್ನು ಸಾರ್ವಜನಿಕ ಸೇವೆಗೆ ಖರ್ಚು ಮಾಡಬೇಕಿದೆ. ಆದರೆ, ಎಲ್ಲ ಹಣವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಕಬ್ಬನ್ ಪೇಟೆಯಲ್ಲಿರುವ ಶಾಲೆಯ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಹಾಗೂ ವೈಟ್‌ಫೀಲ್ಡ್‌ನಲ್ಲಿ ಬ್ರಿಟಿಷರ ಕಾಲದಲ್ಲಿ ನೀಡಿದ್ದ ಲೂರ್ದು ಮಾತೆ ಚರ್ಚಿನ ಆಸ್ತಿಯಲ್ಲಿ ಜಾಯಿಂಟ್ ವೆಂಚರ್ಸ್ ಎಂಬ ಹೆಸರಿನಲ್ಲಿ ಮಳಿಗೆಗಳನ್ನು ನಿರ್ಮಿಸಿಕೊಳ್ಳಲು ಅನುಮತಿ ನೀಡಿದ್ದಾರೆ ಎಂದು ದೂರಿದರು.