ವಿಕಲಚೇತನರಿಗೆ ಮೀಸಲಾತಿ ಯಾಕಿಲ್ಲ?

Update: 2017-12-01 18:38 GMT

ಮಾನ್ಯರೆ,

ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 6,022 ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿತ್ತು. ಆದರೆ ಈ ವೇಳೆ ರಾಜ್ಯ ಸರಕಾರ ಕೆಲವು ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬರುತ್ತಿದೆ.

ಮೊದಲನೆಯದು ಈ ಹುದ್ದೆಗಳಿಗೆ ವಿಕಲಚೇತನರಿಗೆ ಮೀಸಲಾತಿಯನ್ನೇ ಕಲ್ಪಿಸದಿರುವುದು. ಈ ಆದೇಶದ ಪ್ರಕಾರ ರಾಜ್ಯದ ಪ್ರತೀ ಗ್ರಾಮ ಪಂಚಾಯತ್‌ಗೆ ಒಂದು ಡಾಟಾ ಎಂಟ್ರಿ ಹುದ್ದೆಯನ್ನು ಸೃಷ್ಟಿ ಮಾಡಬೇಕಾಗಿದೆ. ಆದರೆ 6,022 ಹುದ್ದೆಗಳು ಖಾಲಿ ಇದ್ದರೂ ವಿಕಲಚೇತನರಿಗೆ ಮಾತ್ರ ಅವಕಾಶ ಇಲ್ಲ. ‘2016ರ ಅಂಗವಿಕಲ ವ್ಯಕ್ತಿಗಳ ಅಧಿನಿಯಮಗಳ ಕಾಯ್ದೆ‘ ಪ್ರಕಾರ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಶೇಕಡ 5ರಷ್ಟು ಮೀಸಲಾತಿ ಕಲ್ಪಿಸಬೇಕು. ಅದರಂತೆ 6,022 ಹುದ್ದೆಗಳ ಪೈಕಿ ವಿಕಲಚೇತನರಿಗೆ ಕನಿಷ್ಠ 300 ಹುದ್ದೆಗಳನ್ನು ಮೀಸಲಿಡಬೇಕು. ಆದರೆ ಇದ್ಯಾವುದು ಈ ನೂತನ ಆದೇಶದಲ್ಲಿಲ್ಲ.

ಎರಡನೆಯದಾಗಿ ಅರ್ಜಿ ಸಲ್ಲಿಸಲು ಕನಿಷ್ಠ 30 ದಿನಗಳ ಕಾಲಾವಕಾಶ ನೀಡಲೇಬೇಕು. ಆದರೆ ಈ ನೇಮಕಾತಿ ಪ್ರಕ್ರಿಯೆಯಲ್ಲಿ ನವೆಂಬರ್ 15ಕ್ಕೆ ಅಧಿಸೂಚನೆ ಹೊರಡಿಸಿ ನವೆಂಬರ್ 30ಕ್ಕೆ ಅರ್ಜಿ ಸಲ್ಲಿಸಬೇಕಿತ್ತು. ಅಂದರೆ ಅರ್ಜಿ ಸಲ್ಲಿಸಲು ಕೇವಲ 15 ದಿನ. ಈ ಎರಡು ತಪ್ಪುಗಳ ಮೂಲಕ ರಾಜ್ಯ ಸರಕಾರ ಸಾಂವಿಧಾನಿಕ ಹಕ್ಕುಗಳನ್ನು ಹಾಗೂ ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿ ಮಾಡಲು ಮುಂದಾಗಿದೆ. ಕೂಡಲೇ ರಾಜ್ಯ ಸರಕಾರ ನೇಮಕಾತಿಯನ್ನು ತಡೆಹಿಡಿದು ನೇಮಕಾತಿ ಆದೇಶದಲ್ಲಿ ತಿದ್ದುಪಡಿ ತರಬೇಕು.

Writer - - ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - - ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News