ಯುವಕನಿಂದ ಹುಚ್ಚ ವೆಂಕಟ್ ಮೇಲೆ ಹಲ್ಲೆ
ಬೆಂಗಳೂರು,ಡಿ.2: ಯಶವಂತಪುರದಲ್ಲಿ ಚಿತ್ರನಟ ಹುಚ್ಚ ವೆಂಕಟ್ ಮೇಲೆ ಯುವಕನೊಬ್ಬ ಹೆಲ್ಮೆಟ್‌ನಿಂದ ನಡುರಸ್ತೆಯಲ್ಲೇ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯಶವಂತಪುರದ ಬಳಿ ರಾತ್ರಿ ಊಟ ತೆಗೆದುಕೊಂಡು ಹೋಗುತ್ತಿದ್ದ ನಟ ವೆಂಕಟ್‌ರನ್ನು ಯುವಕನೊಬ್ಬ ರೇಗಿಸಿದ್ದಾನೆ. ಈ ವೇಳೆ ವೆಂಕಟ್ ಆತನಿಗೆ ಬುದ್ಧಿ ಹೇಳಲು ಹೋಗಿದ್ದು, ಕೋಪಗೊಂಡ ಯುವಕ ಹೆಲ್ಮೆಟ್‌ನಿಂದ ವೆಂಕಟ್ ತಲೆಗೆ ಹಲ್ಲೆ ಮಾಡಿದ್ದಾನೆ. ಹೆಲ್ಮೆಟ್‌ನಿಂದ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತು ದೃಶ್ಯ ಮಾಧ್ಯಮಗಳಲ್ಲಿ ಅದು ಪ್ರಸಾರವಾಗಿದೆ.
ಯಾವುದೋ ಒಂದು ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಗಲಾಟೆ ಉಂಟಾಗಿದ್ದು, ಪಾನಮತ್ತರಾಗಿದ್ದ ಆತನೊಂದಿಗೆ ಮಾತುಕತೆ ನಡೆಸಿ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದೇವೆ ಎಂದು ನಟ ಹುಚ್ಚ ವೆಂಕಟ್ ಹೇಳಿದ್ದಾರೆ.
ಗಲಾಟೆಗಳು ನನಗೆ ಮಾಮೂಲಿ: ಮದ್ಯದ ಅಮಲಿನಲ್ಲಿ ಆತ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಯುವಕ ಕ್ಷಮೆ ಕೇಳಿದ್ದಾನೆ. ಗಲಾಟೆ, ಹಲ್ಲೆಗಳು ನಮಗೆ ದೊಡ್ಡ ವಿಚಾರವಲ್ಲ. ಅದನ್ನು ಎದುರಿಸಬೇಕು ಎಂದಿದ್ದಾರೆ
ಪೊಲೀಸ್ ರಕ್ಷಣೆ ತಗೊಂಡಿಲ್ಲ, ಸೆಕ್ಯೂರಿಟಿಗಳಿಲ್ಲ. ಹೀಗೆ ಯಾರಿಲ್ಲದೇ ಒಬ್ಬನೇ ಓಡಾಡುತ್ತಿದ್ದೀನಿ. ಹೀಗಾಗಿ ಒಂದೊಂದು ಬಾರಿ ಹೀಗಾಗುತ್ತೆ. ಯುವಕ ನನ್ನ ಮೇಲೆ ಹಲ್ಲೆ ಮಾಡಿದ್ದಕ್ಕೆ ನಾನೂ ಹೊಡೆದಿದ್ದೀನಿ. ಹೀಗಾಗಿ ಈ ವಿಚಾರ ಅಲ್ಲಿಗೆ ಮುಗಿದಿದೆ ಎಂದು ಅವರು ಹೇಳಿದ್ದಾರೆ.