×
Ad

ಹಿಟ್ಲರ್‌ನ ಕ್ರೌರ್ಯದ ಛಾಯೆ ದೇಶದಲ್ಲಿಯೂ ಹಬ್ಬುತ್ತಿದೆ: ಪ್ರೊ.ಎಸ್.ಜಿ.ಸಿದ್ಧರಾಮಯ್ಯ

Update: 2017-12-02 18:40 IST

ಬೆಂಗಳೂರು, ಡಿ. 2: ಜರ್ಮನಿಯ ಹಿಟ್ಲರ್‌ನ ಕ್ರೌರ್ಯದ ಛಾಯೆ ಇಂದು ನಮ್ಮ ದೇಶದಲ್ಲಿಯೂ ಹಬ್ಬುತ್ತಿದೆ. ಭಾರತ ಬಹುತ್ವಗಳ ದೇಶ, ವಿಶ್ವದಲ್ಲೇ ಅತ್ಯಂತ ಹೆಚ್ಚು ವೈವಿಧ್ಯತೆಗಳಿರುವ ಈ ದೇಶದಲ್ಲಿ ಹಿಟ್ಲರ್‌ನಂತೆಯೇ ಏಕ ಭಾಷೆ, ಏಕ ಸಂಸ್ಕೃತಿ, ಏಕಧರ್ಮ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಎಐಎಂಎಸ್‌ಎಸ್ ರಷ್ಯಾ ಕ್ರಾಂತಿಯ ಶತಮಾನೋತ್ಸವ ಸಂದರ್ಭದಲ್ಲಿ ‘ಜೋಯಾ ಮತ್ತಿತರ ರಷ್ಯನ್ ಧೀರೆಯರು’, ‘ನಾಳೆಯನ್ನು ಕಂಡವರು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಜರ್ಮನಿಯು ಎರಡನೆ ಮಹಾ ಯುದ್ಧದಲ್ಲಿ ಸೋಲನ್ನನುಭವಿಸಿತಾದರೂ, ಹಿಟ್ಲರನ ಫ್ಯಾಸಿ ವಾದವನ್ನು ಜೀವಂತವಾಗಿಯೇ ಉಳಿಸಿದೆ.

ಅಂದು ಫ್ಯಾಸಿವಾದದ ವಿರುದ್ಧ ಹೋರಾಡಿದ ರಷ್ಯನ್ ಜನತೆ, ಅದರಲ್ಲೂ ಧೀರೋದ್ದಾತವಾಗಿ ಜೀವತೆತ್ತ ಹಲವು ಹೆಣ್ಣುಮಕ್ಕಳ ನೈಜ ಘಟನೆಗಳನ್ನಾಧರಿಸಿ ಬರೆದ ಈ ಪುಸ್ತಕ ನಮ್ಮಲ್ಲಿ ತಲ್ಲಣವನ್ನುಂಟು ಮಾಡುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಚರಿತ್ರೆ ಹಾಗೂ ಪುರಾಣಗಳನ್ನು ವ್ಯಾಖ್ಯಾನಿಸಿದ ಅನೇಕ ಹೆಸರಾಂತ ಲೇಖಕರು, ಮಹಿಳೆಯರ ಸ್ಥಿತಿಯನ್ನು ಪುರುಷ ಧೋರಣೆಯ ಕಣ್ಣುಪಟ್ಟಿಯಿಂದಲೇ ನೋಡಿದ್ದಾರೆ. ಆ ಕಣ್ಣು ಪಟ್ಟಿಯನ್ನು ತೆಗೆದೊಗೆದು, ರಚಿಸಿದ ಈ ಎರಡೂ ಕೃತಿಗಳೂ ವಸ್ತುನಿಷ್ಠವಾಗಿವೆ. ಹೆಣ್ಣುಮಕ್ಕಳ ಬಗೆಗಿನ ಸರಿಯಾದ ಚಿತ್ರಣವನ್ನು ನಮ್ಮ ಮುಂದೆ ತೆರೆದಿಡುತ್ತವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘಟನೆ ಉಪಾಧ್ಯಕ್ಷೆ ಡಾ.ಸುಧಾ ಕಾಮತ್ ಮಾತನಾಡಿ, ಸಮಾಜವಾದಿ ರಷ್ಯಾದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿತು. ರಾಜಕೀಯ, ವಿಜ್ಞಾನ, ಕಲೆ, ಸಾಹಿತ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳು ಮುಂದೆ ಬಂದರು. ಅದರಲ್ಲೂ ವೇಶ್ಯಾವಾಟಿಕೆ ಸಂಪೂರ್ಣವಾಗಿ ತೊಡೆದು ಹಾಕಿದ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದ ದೇಶ ರಷ್ಯಾ ಎಂದು ಸ್ಮರಿಸಿದರು.

ಕೆ.ಉಮಾ ಮಾತನಾಡಿ, ಪದ್ಮಾವತಿ ಎಂಬ ಮಹಾಸತಿಯ ವೈಭವೀಕರಣ, ಚಿತ್ರದ ನಿರ್ದೇಶಕರ ನಟ-ನಟಿಯರ ಅಂಗಾಂಗ ಕತ್ತರಿಸಿ ಎಂಬಂತಹ ಫ್ಯಾಸಿವಾದಿ ಕರಾಳ ಮನೋಧೋರಣೆ ಸಲ್ಲ. ನೈಜ ವ್ಯಕ್ತಿತ್ವ ರೂಪಿಸುವ ಮೌಲ್ಯಗಳನ್ನು ಬೆಳೆಸುವಂತಹ, ಸ್ಫೂರ್ತಿ ತುಂಬುವಂತಹ ಇಂಥ ಪುಸ್ತಕಗಳನ್ನು ಎಲ್ಲ ಹೆಣ್ಣುಮಕ್ಕಳು ಓದಲೇಬೇಕು ಎಂದರು. ಅಧ್ಯಕ್ಷತೆಯನ್ನು ಶೋಭಾ ವಹಿಸಿದ್ದು, ಕೆ.ಶ್ರೀದೇವಿ, ಹರಿಣಿ ಸೇರಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News