ರಾಜ್ಯದಲ್ಲಿ ಮೂರು ವರ್ಷಗಳಲ್ಲಿ 92,899 ಸಣ್ಣ ಕೈಗಾರಿಕೆಗಳ ಸ್ಥಾಪನೆ : ಸಚಿವೆ ಡಾ.ಎಂ.ಸಿ.ಮೋಹನ್‌ಕುಮಾರಿ
ಬೆಂಗಳೂರು, ಡಿ.2: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ(2014-15 ರಿಂದ 2016-17)ರವರೆಗೆ ಒಟ್ಟು 92,899 ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳು ಸ್ಥಾಪನೆಯಾಗಿವೆ ಎಂದು ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ರಾಜ್ಯ ಸಚಿವೆ ಡಾ.ಎಂ.ಸಿ.ಮೋಹನ್‌ಕುಮಾರಿ ತಿಳಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಜೆಡಿಎಸ್‌ನ ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಕೆಎಸ್‌ಎಸ್‌ಐಡಿಸಿ ನಿಗಮದಿಂದ ಸಣ್ಣ ಕೈಗಾರಿಕೆಗಳಿಗೆ ಒಟ್ಟು 1,462 ನಿವೇಶನ(2014-15ರಲ್ಲಿ 365, 2015-16ರಲ್ಲಿ 691 ಹಾಗೂ 2016-17ರಲ್ಲಿ 406)ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ ತುಮಕೂರು-33, ಚಿಕ್ಕಬಳ್ಳಾಪುರ-72, ಚಿತ್ರದುರ್ಗ-35 ಮತ್ತು ದಾವಣಗೆರೆಯಲ್ಲಿ 6 ಕೈಗಾರಿಕಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕನ್ನು ರಾಜ್ಯ ಕೈಗಾರಿಕಾ ನೀತಿ 2014-19ರಂತೆ, ವಲಯ-3 ರಡಿ ಗುರುತಿಸಲಾಗಿದೆ ಎಂದು ಮೋಹನ್‌ಕುಮಾರಿ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸ್ಥಾಪಿಸುವ ಕೈಗಾರಿಕೆಗಳಿಗೆ ಸಹಾಯಧನ ಮತ್ತು ಸವಲತ್ತು ನೀಡಲಾಗುತ್ತಿದೆ. ಬಂಡವಾಳ ಹೂಡಿಕೆ ಸಹಾಯಧನ, ಸ್ಟಾಂಪ್ ಡ್ಯೂಟಿಯಿಂದ ವಿನಾಯಿತಿ ಹಾಗೂ ನೋಂದಣಿ ಶುಲ್ಕದಲ್ಲಿ ರಿಯಾಯಿತಿ, ಭೂ ಪರಿವರ್ತನೆ ಶುಲ್ಕದ ಮರುಪಾವತಿ, ಪ್ರವೇಶ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಇಟಿಪಿ ಸ್ಥಾವರಗಳ ಸ್ಥಾಪನೆಗೆ ಸಹಾಯಧನ, ವಿದ್ಯುತ್‌ಚ್ಛಕ್ತಿ ತೆರಿಗೆಯಿಂದ ವಿನಾಯಿತಿಗಳು, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ ತಂತ್ರಜ್ಞಾನ ನವೀಕರಣ, ಗುಣಮಟ್ಟ ಪ್ರಮಾಣೀಕರಣ ನೀಡಲಾಗುತ್ತಿದೆ ಎಂದು ಮೋಹನ್‌ಕುಮಾರಿ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿಗೆ ಪ್ರತ್ಯೇಕವಾಗಿ ಸದ್ಯಕ್ಕೆ ಯಾವುದೇ ಯೋಜನೆಯನ್ನು ಕೈಗೊಳ್ಳುವ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಆದರೆ, ತಾಲೂಕಿನಲ್ಲಿ 1822 ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕಾ ಘಟಕಗಳು ನೊಂದಣಿಯಾಗಿವೆ ಎಂದು ಮೋಹನ್‌ಕುಮಾರಿ ಮಾಹಿತಿ ನೀಡಿದ್ದಾರೆ.
ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ವಿಶ್ವ ಯೋಜನೆಯಲ್ಲಿ ರಾಜ್ಯದಲ್ಲಿ 809 ವಿಶ್ವ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 461 ವಿಶ್ವ ಮಳಿಗೆಗಳು ಬಳಕೆಯಾಗುತ್ತಿದ್ದು, ಖಾಲಿಯಿರುವ 348 ವಿಶ್ವ ಮಳಿಗೆಗಳನ್ನು ನಿಗಮದಿಂದ ಪ್ರಕಟಣೆ ನೀಡಿ ಅರ್ಹ ಉದ್ದಿಮೆದಾರರಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಅಲ್ಲದೆ, ಸರಕಾರದ ವಿವಿಧ ಇಲಾಖೆಯ ಯೋಜನೆ ಅನುಷ್ಠಾನಕ್ಕೆ ಅವಶ್ಯವಿದ್ದಲ್ಲಿ ನಿಯಮದಂತೆ ವಿಶ್ವ ಮಳಿಗೆಗಳನ್ನು ಉಪಯೋಗಿಸಲು ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ನೋಂದಾಯಿತ ಒಟ್ಟು 82 ಸಕ್ಕರೆ ಕಾರ್ಖಾನೆಗಳಿದ್ದು, ಇವುಗಳ ಪೈಕಿ 2016-17ನೆ ಹಂಗಾಮಿನಲ್ಲಿ 63 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸಿದ್ದು, 2017-18ರಲ್ಲಿ 64 ಕಾರ್ಖಾನೆಗಳು ಕಾರ್ಯಾರಂಭಿಸಲಿವೆ ಎಂದು ಮೋಹನ್‌ಕುಮಾರಿ ಹೇಳಿದ್ದಾರೆ.