ಸಿಸಿಬಿ ಕಚೇರಿಯಲ್ಲಿದ್ದ 1 ಕೋಟಿ 94 ಲಕ್ಷ ಮುಖಬೆಲೆಯ ಹಳೆ ನೋಟು ಕಳ್ಳತನ
ಬೆಂಗಳೂರು, ಡಿ.2: ಬ್ಲಾಕ್ ಅಂಡ್ ವೈಟ್ ದಂಧೆ ನಡೆಯುವ ವೇಳೆ ದಾಳಿ ನಡೆಸಿ ಪೊಲೀಸರು ಹಣ ಗುಳುಂ ಮಾಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ನಂತರ ಕಚೇರಿಯಲ್ಲಿ ಇಡಲಾಗಿದ್ದ 1 ಕೋಟಿ 94 ಲಕ್ಷ ಮುಖಬೆಲೆಯ ಹಳೆ ನೋಟುಗಳು ಕಳ್ಳತನವಾಗಿವೆ ಎನ್ನಲಾಗುತ್ತಿದೆ.
ದಾಳಿ ಮಾಡಿದ ಎಸಿಪಿ ಮರಿಸ್ವಾಮಿ ವಶಪಡಿಸಿಕೊಂಡಿದ್ದ ಹಳೆಯ ನೋಟುಗಳನ್ನು ಸಿಸಿಬಿ ಕಚೇರಿಯಲ್ಲಿ ಇರಿಸಲಾಗಿತ್ತು. ಈ ಹಣವನ್ನು ಚಾಮರಾಜಪೇಟೆಯ ಸಿಸಿಬಿ ಕಚೇರಿಯಿಂದ ಪೊಲೀಸರೇ ಕಳ್ಳತನ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಸಿಬಿ ಕಚೇರಿಯಲ್ಲೇ ಹಣ ಕಳ್ಳತನವಾಗಿರುವ ಹಿನ್ನೆಲೆಯಲ್ಲಿ ಸಿಸಿಬಿ ಡಿಸಿಪಿ ಜಿತೇಂದ್ರ ಕಣಗಾವಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹಣ ಕಳವು ಮಾಡಿರುವ ಹಿಂದೆ ಎಸಿಪಿ ಮತ್ತು ಪೇದೆಗಳಾದ ನರಸಿಂಹ ಮೂರ್ತಿ, ಗಂಗಾಧರ್ ಹಾಗೂ ಎಎಸ್‌ಐ ಹೊಂಬೇಗೌಡ ಪಾತ್ರ ಇದೆ ಎಂಬ ಅನುಮಾನದ ಮೇಲೆ ತನಿಖೆ ನಡೆಯುತ್ತಿದೆ. ನವೆಂಬರ್ 26 ರಂದು ಹೈಗ್ರೌಂಡ್ಸ್ ಬಳಿ ಮಹಿಳೆಯ ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ ಅಧಿಕಾರಿಗಳು ಮೂರು ಕೋಟಿ ಹಣ ವಶಪಡಿಸಿಕೊಂಡಿದ್ದರು. ಅದರಲ್ಲಿ ಕೇವಲ ಒಂದು ಕೋಟಿ ಹಣದ ಲೆಕ್ಕ ಮಾತ್ರ ತೋರಿಸಿ ಉಳಿದ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.
ಆ ನಂತರ ಸಿಸಿಬಿ ಕೇಂದ್ರ ಕಚೇರಿಯಿಂದಲೇ ಹಣ ಕಳ್ಳತನವಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಇನ್ನು ತನಿಖೆ ನಡೆಸುತ್ತಿರುವ ಪೊಲೀಸರು ರಮೇಶ್‌ರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಪೊಲೀಸರು ಮತ್ತು ದೂರುದಾರ ಮಹಿಳೆಯ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ದಾಳಿ ನಡೆಸಿದ್ದ ಸಿಸಿಬಿ ಪೊಲೀಸರೂ ಕೂಡ ಬ್ಲಾಕ್ ಅಂಡ್ ವೈಟ್ ದಂಧೆ ನಡೆಸಲು ಮುಂದಾಗಿದ್ದರು ಎಂಬ ಆರೋಪ ಕೇಳಿಬರುತ್ತಿದೆ. ಇನ್ನು ಆರೋಪದ ಬಳಿಕ ಪೊಲೀಸರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರೇ ಹುಡುಕಾಟ ನಡೆಸುವಂತಾಗಿದೆ.