ಬೆಂಗಳೂರು : ಗುಂಡು ಹಾರಿಸಿ ರೌಡಿಯ ಸೆರೆ
ಬೆಂಗಳೂರು, ಡಿ.3: ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲು ಮುಂದಾದ ರೌಡಿಶೀಟರ್‌ನನ್ನು ಸೆರೆ ಹಿಡಿಯಲು ಕೋಣನಕುಂಟೆ ಪೊಲೀಸರು ಗುಂಡು ಹಾರಿಸಿದ ಘಟನೆ ನಗರದಲ್ಲಿ ನಡೆದಿದೆ.
ಬನ್ನೇರುಘಟ್ಟ ಸಮೀಪದ ಕಲ್ಕರೆಯ ನಿವಾಸಿ ಪಳನಿ(30) ಗುಂಡೇಟಿನಿಂದ ಗಾಯಗೊಂಡಿರುವ ರೌಡಿಶೀಟರ್. ಈತನ ವಿರುದ್ಧ ಕೊಲೆ, ಅಪಹರಣ, ದರೋಡೆ, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ:ಕೊತ್ತನೂರು ದಿಣ್ಣೆಯಲ್ಲಿ ಶನಿವಾರ ರಾತ್ರಿ 9:30ರ ವೇಳೆ ವೆಂಕಟೇಶ ಪ್ರಸಾದ್ ಎಂಬುವರು ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ಎದುರಾದ ಪಳನಿ ಮತ್ತು ಆತನ ಸಹಚರರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ವೆಂಕಟೇಶ್ ಪ್ರಸಾದ್ ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕೋಣನಕುಂಟೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಳನಿ ಮತ್ತು ಆತನ ಸಹಚರರ ಪತ್ತೆಗೆ ರಾತ್ರಿಯೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಜಂಬೂ ಸವಾರಿ ದಿಣ್ಣೆ ಬಳಿ ಪಳನಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಎಸ್ಸೈ ಧರ್ಮೇಂದ್ರ ಮತ್ತವರ ಸಿಬ್ಬಂದಿ ಅಲ್ಲಿಗೆ ತೆರಳಿದ್ದಾರೆ.
ಪೊಲೀಸರನ್ನು ನೋಡಿದ ತಕ್ಷಣ ಪಳನಿ ಮಾರಕಾಸ್ತ್ರಗಳಿಂದ ಪೊಲೀಸ್ ವಾಹನಕ್ಕೆ ಹೊಡೆದಿದ್ದಾನೆ. ಇದರಿಂದ ವಿಚಲಿತರಾದ ಪೊಲೀಸರು ದುಷ್ಕರ್ಮಿಯ ದಾಳಿಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ. ಆದರೆ, ಆತ ಎಸ್ಸೈ ಮೇಲೆ ದಾಳಿಗೆ ಮುಂದಾದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಹೇಳಿದರೂ ಕೇಳಲಿಲ್ಲ.
ಬಳಿಕ ಪೇದೆ ಕಿರಣ್‌ಕುಮಾರ್ ಎಂಬುವರ ಮೇಲೆ ದಾಳಿ ನಡೆಸಿದ್ದರಿಂದ ಎಸ್ಸೈ ಧರ್ಮೇಂದ್ರ ಅವರು ಪಿಸ್ತೂಲಿನಿಂದ ಹಾರಿಸಿದ ಗುಂಡು ಪಳನಿ ಕಾಲಿಗೆ ತಗುಲಿದ್ದು, ಆತ ಕುಸಿದು ಬಿದ್ದಿದ್ದಾನೆ. ಸಿಬ್ಬಂದಿಗಳು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ನಂತರ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಆತನ ಸಹಚರರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ. ಆರೋಪಿ ಪಳನಿ ಮೇಲೆ ಜೆಪಿ ನಗರ, ಕೋರಮಂಗಲ, ಬನ್ನೇರುಘಟ್ಟ, ಹುಳಿಮಾವು ಮತ್ತಿತರ ಠಾಣೆಗಳಲ್ಲಿ ಅಪರಾಧ ಪ್ರಕರಣಗಳ ದಾಖಲಾಗಿವೆ.