ಬೆಂಗಳೂರು: ಸಂಸದ ಪ್ರತಾಪ್ ಸಿಂಹ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

Update: 2017-12-04 10:49 GMT

ಬೆಂಗಳೂರು, ಡಿ.4: ಸಂಸದ ಪ್ರತಾಪ್ ಸಿಂಹ ಪೊಲೀಸರ ಮೇಲೆ ದಬ್ಬಾಳಿಕೆ ಮಾಡಿದ್ದಲ್ಲದೇ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಅವರ  ವಿರುದ್ದ ಇಂದು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕ.ವಿ.ಕಾ. ಅಧ್ಯಕ್ಷ ಎಸ್.ಮನೋಹರ್ ಮಾತನಾಡಿ, ಕರ್ನಾಟಕ ರಾಜ್ಯ ಕಳೆದ ನಾಲ್ಕೂವರೆ ವರ್ಷಗಳಿಂದ ನೆಮ್ಮದಿ, ಶಾಂತಿ ಮತ್ತು ಸಹಬಾಳ್ಳೆಯಿಂದ ಇದೆ. ಆದರೆ ಇಂದು ಬಿಜೆಪಿ ಮುಖಂಡರು ರಾಜಕೀಯ ಅಶಾಂತಿ ಮೂಡಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹನುಮ ಜಯಂತಿ ನೆಪದಲ್ಲಿ ಕಾನೂನು ಉಲ್ಲಂಘನೆ ಮಾಡಿದ ಸಂಸದ್ ಪ್ರತಾಪ ಸಿಂಹ ಪೊಲೀಸ್ ಅಧಿಕಾರಿಗಳ ಮೇಲೆ ದರ್ಪ, ದಬ್ಬಾಳಿಕೆ ಮಾಡಿ 144 ಸೆಕ್ಷನ್ ಉಲ್ಲಂಘಿಸಿ ರಾಜ್ಯದಲ್ಲಿ ಕೋಮು ಗಲಭೆ ಉಂಟಾಗಲು ಕಾರಣಕರ್ತರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಾಹ ಸಿಂಹರ ಲೋಕಸಭಾ ಸದಸ್ಯತ್ವ ಅನೂರ್ಜಿತಗೊಳಿಸಬೇಕು ಎಂದು ಒತ್ತಾಯಿಸಿದ ಮನೋಹರ್ ಅವರು, ಪ್ರತಾಪ್ ಸಿಂಹ ಮಾಡಿರುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮರ್ಥನೆ ಮಾಡಿಕೊಳ್ಳುತ್ತಾರೆ. ಕಾನೂನಿನ ಬಗ್ಗೆ ಗೌರವವಿಲ್ಲದ ಇಂತಹ ವ್ಯಕ್ತಿಗಳ ಬಗ್ಗೆ ರಾಜ್ಯದ ಜನತೆ ಎಚ್ಚರ ವಹಿಸಬೇಕು. ಕೋಮುವಾದಿಗಳು ಅಧಿಕಾರ ಹಿಡಿಯಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಇಂತವರಿಗೆ ಬುದ್ಧಿ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಯೋಜನಾ ಆಯೋಗದ ಸದಸ್ಯ ಜನಾರ್ದನ್, ಕಾಂಗ್ರೆಸ್ ಮುಖಂಡರಾದ ಸಲೀಮ್, ಶೇಖರ್, ಹೇಮರಾಜು, ಆನಂದ್, ನವೀನ್ ಮತ್ತು ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News