×
Ad

ಅಮಿತ್ ಶಾ ಮೇಲೆಯೂ ಕೇಸು ಹಾಕಿ: ಕುಮಾರಸ್ವಾಮಿ

Update: 2017-12-04 18:56 IST

ಬೆಂಗಳೂರು, ಡಿ. 4: ಸಂಸದ ಪ್ರತಾಪ್ ಸಿಂಹ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಬೇಕು. ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ನಿರ್ದೇಶನದಿಂದಲೇ ಪ್ರತಾಪ್ ಸಿಂಹ ಪೊಲೀಸ್ ಬ್ಯಾರಿಕೇಡನ್ನು ಕಾರಿನಲ್ಲಿ ತಳ್ಳಿಕೊಂಡು ಪರಾರಿಯಾಗಿದ್ದಾರೆ.  ಅಮಿತ್ ಶಾ ಮೇಲೆಯೂ ಸರಕಾರ ಕೇಸು ಹಾಕಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸೋಮವಾರ ನಗರದ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹನುಮ ಜಯಂತಿ ವೇಳೆ ಕಾನೂನು ಉಲ್ಲಂಘನೆ ಮಾಡಿದ್ದು, ಆಂಜನೇಯ ಸ್ವಾಮಿಗೆ ಮಾಡಿದ ಅಪಮಾನ. ಪ್ರತಾಪ್ ಸಿಂಹ ಬ್ಯಾರಿಕೇಡ್ ಒಡೆದು ಹಾಕಿದ್ದು ಹಾಗೂ ಅವರ ವಿಡಿಯೋ ನೋಡಿದರೆ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ನಿರ್ದೇಶನ ಇರುವುದು ನಿಶ್ಚಳವಾಗಿದೆ ಎಂದರು.

ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ. ಕಾಂಗ್ರೆಸ್, ಬಿಜೆಪಿಯನ್ನು ಅಲ್ಪಸಂಖ್ಯಾತರ ವಿರೋಧಿ ಎನ್ನುತ್ತಿದೆ. ಒಬ್ಬರು ಬೆಂಕಿಕಡ್ಡಿ ಗೀರಿದರೆ, ಮತ್ತೊಬ್ಬರು ಸೀಮೆಎಣ್ಣೆ ಸುರೀತಾರೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡರ ಬಗ್ಗೆ ಕೆಲ ಉರ್ದು ಪತ್ರಿಕೆಗಳಲ್ಲಿ ಉದ್ದೇಶಪೂರ್ವಕವಾಗಿ ಕೆಲವರು ಅವಹೇಳನಕಾರಿಯಾಗಿ ಬರೆಯುತ್ತಿದ್ದಾರೆ. ಈ ಬಗ್ಗೆ ಆ ಸಮುದಾಯದ ಮುಖ್ಯಸ್ಥರನ್ನು ಕರೆಸಿ ಈಗಾಗಲೇ ಬುದ್ಧಿವಾದ ಹೇಳಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಜ.9ಕ್ಕೆ ಮಂಗಳೂರಿನಲ್ಲಿ ‘ಜೆಡಿಎಸ್ ನಡಿಗೆ ಸೌಹಾರ್ದತೆ ಕಡೆಗೆ’ ರ್ಯಾಲಿ ನಡೆಸಲಾಗುವುದು ಎಂದ ಅವರು, ಡಿ.ಕೆ.ರವಿ ಅವರ ಮಾವ ಹನುಮಂತರಾಯಪ್ಪ ಜೆಡಿಎಸ್ ಸೇರ್ಪಡೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಟಿಕೆಟ್ ಹಂಚಿಕೆ ವಿಚಾರವಾಗಿ ನಾನು ಮತ್ತು ಪಕ್ಷದ ಹಿರಿಯ ನಾಯಕರೇ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧೆ ಮಾಡುತ್ತಾನೆ ಅನ್ನೋದನ್ನು ಮರೆತುಬಿಡಿ ಎಂದು ಸ್ಪಷ್ಟಪಡಿಸಿದ ಅವರು, ನನ್ನ ಯಾತ್ರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಾಶೀರ್ವಾದ ಯಾತ್ರೆಗೂ ವ್ಯತ್ಯಾಸವಿದೆ. ಕಾರ್ಯಕರ್ತರ ದುಡಿಮೆ ಹಣದಿಂದ ನಮ್ಮ ಯಾತ್ರೆ ನಡೆಯುತ್ತಿದೆ ಎಂದು ತಿರುಗೇಟು ನೀಡಿದರು.

‘ಬಾಬಾಬುಡನ್ ಗಿರಿ ದತ್ತಪೀಠದ ವಿಚಾರದಲ್ಲಿ ಸರಕಾರ ಪೂರ್ಣ ವಿಫಲವಾಗಿದೆ. ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ದತ್ತಪೀಠದ ವಿಚಾರದಲ್ಲಿ ಅಲ್ಲಿನ ಎಸ್ಪಿಗೆ ಆದೇಶ ನೀಡಿ ಡಿ.ವಿ.ಸದಾನಂದಗೌಡ ಅವರನ್ನು ಬಂಧನಕ್ಕೆ ಆದೇಶ ಮಾಡಿದ್ದೆ. ಆದರೆ, ನಿನ್ನೆ ದತ್ತಪೀಠದಲ್ಲಿ ನಡೆದಿದ್ದನ್ನು ಗಮನಿಸಿದರೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಸೋತಿದೆ’
-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News