ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ: ನಿಮಗೆ ತಿಳಿದಿರಲೇಬೇಕಾದ ಅಗತ್ಯ ಮಾಹಿತಿಗಳು ಇಲ್ಲಿದೆ...
ಬೆಂಗಳೂರು, ಡಿ.5: ರಾಜ್ಯದ 224 ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಚುನಾವಣಾಧಿಕಾರಿಗಳ ಅಧಿಕೃತ ಅಂತರ್ಜಾಲ ತಾಣ www.ceo karnataka.kar.nic.inದಲ್ಲಿ ಪ್ರಕಟಿಸಿದ್ದು, ಸಾರ್ವಜನಿಕರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಪರಿಶೀಲಿಸಬಹುದು. ತಪ್ಪಿದ್ದಲ್ಲಿ ಪರಿಷ್ಕರಣೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.
ಸೋಮವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಮುಖ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಯ ಪ್ರತಿಗಳನ್ನು ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳಿಗೆ ನೀಡಿದ್ದಾರೆ ಎಂದರು.
ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಡಿ.6 ರಿಂದ 21ರವರೆಗೆ ಮತದಾರರ ಪಟ್ಟಿಯ ವಿವರಗಳನ್ನು ಗ್ರಾಮಸಭೆ, ಮುನ್ಸಿಪಾಲಿಟಿ, ನಗರಸಭೆ ಹಾಗೂ ಪಂಚಾಯತ್‌ಗಳಲ್ಲಿ ಓದುವುದು ಮತ್ತು ಅದರ ಪರಿಶೀಲನೆ ಕಾರ್ಯ ನಡೆಯಲಿದೆ ಎಂದು ಸಂಜೀವ್‌ಕುಮಾರ್ ಹೇಳಿದರು. ಡಿ.3ರಿಂದ 17ರವರೆಗೆ ಬೂತ್ ಮಟ್ಟದಲ್ಲಿ ವಿಶೇಷ ಆಂದೋಲನ ಮತ್ತು ಅರ್ಜಿಗಳನ್ನು ಸ್ವೀಕರಿಸಲಾಗು ವುದು. ಡಿ.29ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದುಹಾಕುವಿಕೆ ಹಾಗೂ ವಿವರಗಳ ತಿದ್ದುಪಡಿಗೆ ಮತದಾರರು ಅರ್ಜಿಗಳನ್ನು ಸಲ್ಲಿಸಬಹು ದಾಗಿದೆ ಎಂದು ಅವರು ತಿಳಿಸಿದರು.
► ರಾಜ್ಯದಲ್ಲಿ 4,88,86,906 ಮತದಾರರು ನೋಂದಣಿ
ರಾಜ್ಯದಲ್ಲಿ ಇದುವರೆಗೆ 2,48,37,240 ಪುರುಷ ಹಾಗೂ 2,40,49,668 ಮಹಿಳೆಯರು ಸೇರಿದಂತೆ ಒಟ್ಟು 4,88,86,906 ಮತದಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಪಟ್ಟಿ ಪರಿಷ್ಕರಣೆ ಈಗಾಗಲೇ ಆರಂಭವಾಗಲಿದ್ದು, ನವ ಮತದಾರರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಸಂಜೀವ ಕುಮಾರ್ ಹೇಳಿದರು.
ಅಕ್ಟೋಬರ್ ವೇಳೆಗೆ ರಾಜ್ಯದಲ್ಲಿ 4,90,06,901 ಮತದಾರರಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಫೆ.15ಕ್ಕೆ ಬಿಡುಗಡೆ ಮಾಡಲಾಗುತ್ತದೆ. ವಿಶೇಷ ಪ್ರಕರಣಗಳಲ್ಲಿ ಚುನಾವಣೆಗೆ ಒಂದು ವಾರದವರೆಗೆ ಅರ್ಹರ ಹೆಸರನ್ನು ಸೇರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
► ಐದು ವರ್ಷಗಳಲ್ಲಿ 72 ಲಕ್ಷ ಹೆಚ್ಚು ಮತದಾರರು
ಕಳೆದ 2013ರ ಚುನಾವಣೆಯ ಬಳಿಕ ಇದುವರೆಗೆ ಅಂದರೆ ಕಳೆದು ಐದು ವರ್ಷಗಳಲ್ಲಿ ಒಟ್ಟು ಮತದಾರರ ಸಂಖ್ಯೆಯಲ್ಲಿ ಸುಮಾರು 72 ಲಕ್ಷ ಮತದಾರರು ಏರಿಕೆಯಾಗಿದ್ದಾರೆ. 2013ರ ವೇಳೆ 4,18,38,541 ಮತದಾರರಿದ್ದರು ಎಂದರು.
► ಬೆಂಗಳೂರಿನಲ್ಲಿ 85 ಲಕ್ಷ ಮತದಾರರು
’’ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ. ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಹಾಗೂ ನಗರ ಭಾಗದಲ್ಲಿ 44,61,725 ಪುರುಷ ಹಾಗೂ 40,35,467 ಮಹಿಳಾ ಮತದಾರರು ಸೇರಿ ಒಟ್ಟು 84,97,192 ಜನರಿದ್ದಾರೆ. ಶೃಂಗೇರಿ 1.60 ಲಕ್ಷ ಮತದಾರರನ್ನು ಹೊಂದುವ ಮೂಲಕ ಅತಿ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರ ಎನಿಸಿಕೊಂಡಿದೆ. 4,340 ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಬಾರಿ 2,433 ಹೊಸ ಬೂತ್ ರಚನೆಯಾಗಲಿದೆ. ರಾಜ್ಯದಲ್ಲಿ ಒಟ್ಟು 56 ಸಾವಿರ ಬೂತ್‌ಗಳಿದ್ದು, ಹೊಸ ಬೂತ್‌ಗಳ ಪೈಕಿ 574 ಬೂತ್‌ಗಳು ಬೆಂಗಳೂರು ವ್ಯಾಪ್ತಿಯಲ್ಲಿವೆ ’’ಎಂದು ಹೇಳಿದರು.
► ಇವಿಎಂಗಳ ಬಗ್ಗೆ ಅಪನಂಬಿಕೆ ಬೇಡ
ಇಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳ ಬಗ್ಗೆ ಮತದಾರರು ಯಾವುದೇ ಅಪನಂಬಿಕೆಗಳನ್ನಿಟ್ಟುಕೊಳ್ಳುವುದು ಬೇಡ. ಬೇರೆ ರಾಜ್ಯಗಳಲ್ಲಿ ನಡೆದಿರುವ ಚುನಾವಣೆಗಳ ಬಗ್ಗೆ ನಾನು ಮಾತನಾಡಲ್ಲ. ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ. ಈ ಸಂಬಂಧ ರಾಜಕೀಯ ಪಕ್ಷಗಳಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು. ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ ಮಾಡಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಇವುಗಳನ್ನು ಬಳಸುತ್ತೇವೆ ಎಂದು ಸಂಜೀವ ಕುಮಾರ್ ಸ್ಪಷ್ಟಪಡಿಸಿದರು.
ಅರ್ಜಿ ಸಲ್ಲಿಸುವುದು ಹೇಗೆ?
♦ ಅರ್ಜಿಗಳು ಚುನಾವಣಾ ನೋಂದಣಿ ಅಧಿಕಾರಿ(ERO) ಮತ್ತು ಮತಗಟ್ಟೆ ಮಟ್ಟದ ಅಧಿಕಾರಿ(BLO) ಗಳಿಂದ ಪಡೆಯಬಹುದು
♦ ಅರ್ಜಿಗಳನ್ನು ವೆಬ್ ಸೈಟ್ www.eci.nic.in ಅಥವಾ www.ceokarnataka.kar.nic.inನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
♦ ಭರ್ತಿ ಮಾಡಿದ ಅರ್ಜಿಗಳನ್ನು ವಯೋಮಿತಿ, ವಿಳಾಸ ಹಾಗೂ ಭಾವಚಿತ್ರ ಇತ್ಯಾದಿ ಅಗತ್ಯವಾದ ದಾಖಲೆಗಳೊಂದಿಗೆ ಸಂಬಂಧಿಸಿದ ಇ.ಆರ್.ಓ. ಅಥವಾ ಬಿ.ಎಲ್.ಓ. ಅಧಿಕಾರಿಗಳ ಬಳಿ ಸಲ್ಲಿಸುವುದು.
♦ www.nvsp.in ಅಥವಾ www.voterreg.kar.nic.in ಮೂಲಕ ಆನ್ ಲೈನ್ ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು.
♦ ಸಾಗರೋತ್ತರ ಮತದಾರರು ಫಾರಂ 6ಎ ಮೂಲಕ ಕಡತಕ್ಕೆ ಸೇರಿಸಲು ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದು.
*ಬಳಸಬೇಕಾದ ಅರ್ಜಿಗಳ ವಿವರ
♦ ಫಾರಂ-6
ಹೊಸದಾಗಿ ನೋಂದಾಯಿಸಲು ಅಥವಾ ಒಂದು ವಿಧಾನಸಭಾ ಕ್ಷೇತ್ರದಿಂದ ಇನ್ನೊಂದು ವಿಧಾನಸಭಾ ಕ್ಷೇತ್ರಕ್ಕೆ ವಿಳಾಸವನ್ನು ಬದಲಾಯಿಸಲು.
♦ ಫಾರಂ-6A
ಭಾರತೀಯ ಪಾಸ್ ಪೋರ್ಟ್ ಹೊಂದಿರುವ ಸಾಗರೋತ್ತರ ಭಾರತೀಯರಿಗಾಗಿ
♦ ಫಾರಂ-7
ಅಸ್ತಿತ್ವದಲ್ಲಿರುವ ಹೆಸರನ್ನು ತೆಗೆದು ಹಾಕಲು ಅಥವಾ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವುದರ ವಿರುದ್ಧ ಆಕ್ಷೇಪಣೆ ಕೋರಿ
♦ ಫಾರಂ-8
ಮತದಾರರ ಪಟ್ಟಿಯಲ್ಲಿನ ದಾಖಲೆಗಳಲ್ಲಿ ಬದಲಾವಣೆ/ತಿದ್ದುಪಡಿ ಕೋರಿ.
♦ ಫಾರಂ-8A
ಒಂದೇ ವಿಧಾನಸಭಾ ಕ್ಷೇತ್ರದಡಿಯಲ್ಲಿ ವಿಳಾಸ ಬದಲಾವಣೆ ಕೋರಿ.
ನೀವು ಒಂದು ಮತಕ್ಷೇತ್ರದಲ್ಲಿ ಮಾತ್ರ ನೋಂದಾಯಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ಆಯೋಗದ ವೆಬ್ ಸೈಟ್ www.ceokarnataka.kar.nic.in ಗೆ ಭೇಟಿ ಕೊಡಿ.