ಅಯೋಧ್ಯೆ ವಿವಾದ: ಅಂತಿಮ ವಿಚಾರಣೆಯನ್ನು ಫೆ.8ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

Update: 2017-12-05 12:55 GMT

ಹೊಸದಿಲ್ಲಿ, ಡಿ.5 : ಅಯೋಧ್ಯೆ ವಿವಾದದ ಕುರಿತ ಪ್ರಕರಣದ ಅಂತಿಮ ವಿಚಾರಣಾ ದಿನಾಂಕವನ್ನು 2018ರ ಫೆಬ್ರವರಿ 8ಕ್ಕೆ  ಸುಪ್ರೀಂ ಕೋರ್ಟ್ ಮುಂದೂಡಿದೆ. ಇಂದು ವಿಚಾರಣೆ ಆರಂಭಗೊಂಡಾಗ, ಸುನ್ನಿ ವಕ್ಫ್ ಮಂಡಳಿಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರಕರಣದ ಪ್ರತಿವಾದಿಗಳು ಅಲಹಾಬಾದ್ ಹೈಕೋರ್ಟಿನ ಮುಂದೆ ಪ್ರಸ್ತುತ ಪಡಿಸಿದ ದಾಖಲೆಗಳ ಬಗ್ಗೆ  ಮಾಹಿತಿ ನೀಡಿದರಲ್ಲದೆ ಸುಪ್ರೀಂ ಕೋರ್ಟಿನ ಮುಂದೆ ಈ ಎಲ್ಲಾ ದಾಖಲೆಗಳನ್ನು ಹಾಜರುಪಡಿಸಲಾಗಿಲ್ಲ ಎಂದು ತ್ರಿಸದಸ್ಯ ಪೀಠಕ್ಕೆ ತಿಳಿಸಿದರು.

ಕಪಿಲ್ ಸಿಬಲ್ ಅವರ ವಾದವನ್ನು ಒಪ್ಪದ ಉತ್ತರ ಪ್ರದೇಶ ಸರಕಾರವನ್ನು ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಎಲ್ಲಾ ಸಂಬಂಧಿತ ದಾಖಲೆಗಳು ಹಾಗೂ ಅಗತ್ಯ ಅನುವಾದಿತ ಪ್ರತಿಗಳೂ ದಾಖಲಿಸಲ್ಪಟ್ಟಿವೆ ಎಂದರು.

ಇದಕ್ಕೆ ಮರು ಆಕ್ಷೇಪ ಸಲ್ಲಿಸಿದ ಕಪಿಲ್ ಸಿಬಲ್ ತಾವು ಮತ್ತು ಇತರ ಅಪೀಲುದಾರರಿಗೆ ಕೆಲವು ಅಪೀಲುಗಳ ಬಗೆಗಿನ ದಾಖಲೆಗಳನ್ನು ಸಲ್ಲಿಸಲಾಗಿಲ್ಲ. ಎಲ್ಲಾ  ಪ್ರತಿವಾದಗಳೂ ಪೂರ್ಣಗೊಂಡ ನಂತರ ಈ ಪ್ರಕರಣದ ವಿಚಾರಣೆಯನ್ನು 2019ರ ಜುಲೈ 15ರಲ್ಲಿ  ಮತ್ತೆ ಕೈಗೆತ್ತಿಕೊಳ್ಳಬೇಕೆಂಬುದು ತಮ್ಮ ವೈಯಕ್ತಿಕ ಮನವಿಯಾಗಿದೆ ಎಂದು ಸಿಬಲ್ ಹೇಳಿದರೂ ಇದನ್ನು ನ್ಯಾಯಾಲಯ ಒಪ್ಪಲಿಲ್ಲ.

ನಾಲ್ಕು ಸಿವಿಲ್ ಕೇಸುಗಳಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ 13 ಅಪೀಲುಗಳ ವಿಚಾರಣೆಯನ್ನು  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ  ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ಅವರ ಪೀಠ ಇಂದು ಆರಂಭಿಸಿತ್ತು. ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ವಿವಾದಿತ 2.77 ಎಕ್ರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಹಾಗೂ ರಾಮ ಲಲ್ಲಾ ದೇವರ ನಡುವೆ ವಿಭಾಗಿಸಬೇಕೆಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News