×
Ad

ಡಿ.13ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಒಂದು ತಿಂಗಳು ರಾಜ್ಯ ಪ್ರವಾಸ

Update: 2017-12-05 19:15 IST

ಬೆಂಗಳೂರು, ಡಿ. 5: ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.13ರಿಂದ 2018ರ ಜ.13ರ ವರೆಗೆ 1 ತಿಂಗಳ ಕಾಲ ರಾಜ್ಯದ (ಉತ್ತರ ಕನ್ನಡ ಜಿಲ್ಲೆ ಹೊರತುಪಡಿಸಿ) ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಶಾಸಕರ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ-ಶಂಕುಸ್ಥಾಪನೆ ನೆರವೇರಿಸಲಿದ್ದು, ಒಂದು ಜಿಲ್ಲೆಯ ಕನಿಷ್ಟ ಎರಡು ಅಥವಾ ಮೂರು ಕ್ಷೇತ್ರದಲ್ಲಿ ಪ್ರವಾಸ ನಡೆಸಲಿದ್ದಾರೆ. ಅಲ್ಲದೆ, ಅದೇ ಜಿಲ್ಲೆಯಲ್ಲಿ ರಾತ್ರಿ ವಾಸ್ತವ್ಯವನ್ನು ಹೂಡಲಿದ್ದಾರೆ.

ಡಿ.13ರ ಬೆಳಗ್ಗೆ 10:30ಕ್ಕೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಿಂದ ಪ್ರವಾಸ ಆರಂಭಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹುಮ್ನಾಬಾದ್ ಹಾಗೂ ಭಾಲ್ಕಿ ಕ್ಷೇತ್ರದಲ್ಲಿ ಪ್ರವಾಸ ನಡೆಸಲಿದ್ದು, ರಾತ್ರಿ ಕೊಪ್ಪಳ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.

ಡಿ.14ಕ್ಕೆ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ರಾಯಚೂರಿನಲ್ಲಿ ವಾಸ್ತವ್ಯ ಇರಲಿದ್ದಾರೆ. ಡಿ.15ಕ್ಕೆ ರಾಯಚೂರಿನ ಲಿಂಗಸೂರು, ಮಾನ್ವಿ, ಕಲಬುರ್ಗಿಯಲ್ಲಿ ವಾಸ್ತವ್ಯ. ಡಿ.16ಕ್ಕೆ ಅಫ್ಜಲ್‌ಪುರ-ಸೇಡಂ ಹಾಗೂ ಜೇವರ್ಗಿ ಪ್ರವಾಸ ಕೈಗೊಳ್ಳಲಿದ್ದು, ಯಾದಗಿರಿಯಲ್ಲಿ ವಾಸ್ತವ್ಯ ಇರಲಿದ್ದಾರೆ.

ಡಿ.17ಕ್ಕೆ ಗುರುಮಿಠಕಲ್, ಶಹಾಪುರ ಹಾಗೂ ಸುರಪುರ ಕ್ಷೇತ್ರದಲ್ಲಿ ಪ್ರವಾಸ, ಬಳ್ಳಾರಿಯಲ್ಲಿ ವಾಸ್ತವ್ಯ. ಡಿ.18ಕ್ಕೆ ಸಂಡೂರು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಅಥವಾ ಸಿರುಗುಪ್ಪ ಪ್ರವಾಸ, ಬಾಗಲಕೋಟೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಿದೆ.

ಡಿ.19ಕ್ಕೆ ಜಮಖಂಡಿ, ತೇರದಾಳ ಹಾಗೂ ಬೀಳಗಿ(ವಿಜಯಪುರದಲ್ಲಿ ವಾಸ್ತವ್ಯ). ಡಿ.20ಕ್ಕೆ ಮುದ್ದೇಬಿಹಾಳ, ಬಬಲೇಶ್ವರ ಹಾಗೂ ವಿಜಯಪುರ ನಗರ(ಬೆಳಗಾವಿಯಲ್ಲಿ ವಾಸ್ತವ್ಯ), ಡಿ.21ಕ್ಕೆ ಕುಡಿಚಿ, ರಾಯಬಾಗ ಹಾಗೂ ಗೋಕಾಕ(ಬೆಳಗಾವಿಯಲ್ಲಿ ವಾಸ್ತವ್ಯ).

ಡಿ.22ಕ್ಕೆ ಯಮಕನಮರಡಿ, ರಾಮದುರ್ಗ, ಕಿತ್ತೂರು(ಧಾರವಾಡದಲ್ಲಿ ವಾಸ್ತವ್ಯ), ಡಿ.23ಕ್ಕೆ ಹುಬ್ಬಳ್ಳಿ, ಧಾರವಾಡ, ಕುಂದಗೊಳ(ಹಾವೇರಿ ವಾಸ್ತವ್ಯ), ಡಿ.24ಕ್ಕೆ ಹಾವೇರಿ ಹಾಗೂ ಬ್ಯಾಡಗಿ(ಗದಗ ವಾಸ್ತವ್ಯ), ಡಿ.25ಕ್ಕೆ ಗದಗ, ಲಕ್ಷ್ಮೇಶ್ವರ(ದಾವಣಗೆರೆ), ಡಿ.26ಕ್ಕೆ ಜಗಳೂರು, ಹೊನ್ನಾಳಿ, ಹರಪ್ಪನಹಳ್ಳಿ(ಚಿತ್ರದುರ್ಗದಲ್ಲಿ ವಾಸ್ತವ್ಯ).

ಡಿ.27ಕ್ಕೆ ಹೊಳಲ್ಕೆರೆ, ಚಳ್ಳಕೆರೆ ಹಾಗೂ ಹಿರಿಯೂರು(ತುಮಕೂರಿನಲ್ಲಿ ವಾಸ್ತವ್ಯ), ಡಿ.28ಕ್ಕೆ ಶಿರಾ, ಚಿಕ್ಕನಾಯಕನಹಳ್ಳಿ, ತುಮಕೂರು(ಬೆಂಗಳೂರಿನಲ್ಲಿ ವಾಸ್ತವ್ಯ), ಡಿ.29ಕ್ಕೆ ಗೌರಿಬಿದನೂರು, ಬಾಗೇಪಲ್ಲಿ ಹಾಗೂ ಶಿಡ್ಲಘಟ್ಟ, ಡಿ.30ಕ್ಕೆ ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ ಕ್ಷೇತ್ರದಲ್ಲಿ ಪ್ರವಾಸ (ಬೆಂಗಳೂರಿನಲ್ಲಿ ವಾಸ್ತವ್ಯ) ಕೈಗೊಳ್ಳಲಿದ್ದಾರೆ. ಡಿ.31, ಜನವರಿ 1, 2 ರಂದು ಪ್ರವಾಸ ಇರುವುದಿಲ್ಲ.

ಜ.3ರಂದು ಮಾಗಡಿ, ರಾಮನಗರ, ಕನಕಪುರ, ಜ.4ಕ್ಕೆ ಅರಸೀಕೆರೆ, ಬೇಲೂರು, ಅರಕಲಗೂಡು(ಚಿಕ್ಕಮಗಳೂರಿನಲ್ಲಿ ವಾಸ್ತವ್ಯ), ಜ.5ಕ್ಕೆ ಮೂಡಿಗೆರೆ, ತರೀಕೆರೆ, ಕಡೂರು(ಶಿವಮೊಗ್ಗದಲ್ಲಿ ವಾಸ್ತವ್ಯ), ಜ.6ಕ್ಕೆ ಶಿವಮೊಗ್ಗ ನಗರ, ತೀರ್ಥಹಳ್ಳಿ ಹಾಗೂ ಸಾಗರ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಜ.7ಕ್ಕೆ ಬೆಳ್ತಂಗಡಿ, ಮೂಡುಬಿದಿರೆ, ಪುತ್ತೂರು(ಉಡುಪಿಯಲ್ಲಿ ವಾಸ್ತವ್ಯ), ಜ.8ಕ್ಕೆ ಬೈಂದೂರು, ಕಾಪು(ಮಡಿಕೇರಿಯಲ್ಲಿ ವಾಸ್ತವ್ಯ), ಜ.9ಕ್ಕೆ ಮಡಿಕೇರಿ ಹಾಗೂ ವಿರಾಜಪೇಟೆ(ಚಾಮರಾಜನಗರದಲ್ಲಿ ವಾಸ್ತವ್ಯ), ಜ.10ಕ್ಕೆ ಹನೂರು, ಕೊಳ್ಳೆಗಾಲ, ಚಾಮರಾಜನಗರ(ಮೈಸೂರಿನಲ್ಲಿ ವಾಸ್ತವ್ಯ).

ಜ.11ಕ್ಕೆ ಎಚ್.ಡಿ.ಕೋಟೆ, ನಂಜನಗೂಡು, ಟಿ.ನರಸೀಪುರ, ವರುಣಾ (ಮಂಡ್ಯದಲ್ಲಿ ವಾಸ್ಯವ್ಯ), ಜ.12ಕ್ಕೆ ಮಳವಳ್ಳಿ, ಶ್ರೀರಂಗಪಟ್ಟಣ, ಕೆಆರ್ ಪೇಟೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು(ಬೆಂಗಳೂರಿನಲ್ಲಿ ವಾಸ್ತವ್ಯ), ಜ.13ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.

ಕಾರ್ಯಕರ್ತರ ಸಭೆ: ಮುಖ್ಯಮಂತ್ರಿ ಪ್ರವಾಸದ ಸಂದರ್ಭದಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ, ಮಡಿಕೇರಿ, ವಿರಾಜಪೇಟೆ, ಟಿ.ನರಸೀಪುರ, ವರುಣಾ ಕ್ಷೇತ್ರ ಸೇರಿ ವಿವಿಧ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಏರ್ಪಡಿಸಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಳ್ಳಲಿರುವ 1ತಿಂಗಳ ಪ್ರವಾಸಕ್ಕೆ ಸುಮಾರು 50ಕೋಟಿ ರೂ.ವೆಚ್ಚವಾಗಲಿದ್ದು, ಪ್ರವಾಸ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ ಕಲ್ಪಿಸುವ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News