ಶಿವಾನಂದ ಸರ್ಕಲ್ ಉಕ್ಕಿನ ಮೇಲ್ಸೇತುವೆ ಯೋಜನೆಯ ದೃಢೀಕರಣ ಪತ್ರದ ವಿವರ ನೀಡಲು ಹೈಕೋರ್ಟ್ ಸೂಚನೆ
ಬೆಂಗಳೂರು, ಡಿ.5: ನಗರದ ಶಿವಾನಂದ ಸರ್ಕಲ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆಗೆ ಸಂಬಂಧಿಸಿದ ದೃಢೀಕರಣ ಪತ್ರದ ವಿವರವನ್ನು ನೀಡಲು ಹೈಕೋರ್ಟ್ ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿತು. ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಲು ಕೋರಿ ಕುಮಾರ ಪಾರ್ಕ್ ಪೂರ್ವ ಭಾಗದ ನಿವಾಸಿ ಬಿ.ಪಿ.ಮಹೇಶ್ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠದಲ್ಲಿ ಮಂಗಳವಾರ ನಡೆಯಿತು.
ಬಿಬಿಎಂಪಿ ಪರ ವಾದಿಸಿದ ಹಿರಿಯ ವಕೀಲ ಡಿ.ಎನ್.ನಂಜುಂಡರೆಡ್ಡಿ ಅವರು, ಶಿವಾನಂದ ಸರ್ಕಲ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆಯ ಎತ್ತರ 4.5 ಮೀಟರ್ ಇದ್ದರೆ ಯಾವುದೇ ಅಪಾಯವಿಲ್ಲ ಎಂದು ಮೇಲ್ಸೇತುವೆ ತಜ್ಞರ ಸಮಿತಿಯ ಮುಖ್ಯ ಎಂಜಿನಿಯರ್ ಶ್ರೀನಿವಾಸಮೂರ್ತಿ ವರದಿ ನೀಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಉಕ್ಕಿನ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಿರುವ ಸ್ಥಳವು ಚಿಕ್ಕದಾಗಿರುವುದರಿಂದ ಮೇಲ್ಸೇತುವೆಯ 4.5ನಿಂದ 5.5ಮೀಟರ್‌ಗೆ ಎತ್ತರಿಸುವ ಅವಶ್ಯಕತೆ ಇಲ್ಲ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಾದಿಸಿದ ವಕೀಲ ಅಶೋಕ್ ಬಿ. ಪಾಟೀಲ್ ಅವರು, ಶಿವಾನಂದ ಸರ್ಕಲ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆಯನ್ನು ಭಾರತೀಯ ರಸ್ತೆ ಕಾಂಗ್ರೆಸ್(ಐಆರ್‌ಸಿ) ಮಾರ್ಗಸೂಚಿ ಅನುಸಾರವಾಗಿ ನಿರ್ಮಿಸದಿದ್ದರೆ ಅಪಘಾತಗಳು ಹೆಚ್ಚಾಗಿ ಸಾವು ನೋವುಗಳು ಸಂಭವಿಸುತ್ತವೆ ಎಂದು ಪೀಠಕ್ಕೆ ತಿಳಿಸಿದರು.