ಅರ್ಜಿದಾರರ ಮನವಿ ಸ್ವೀಕರಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಡಿ.5: ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ವಿಜಯಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್ಸ್ ಮಾಲಕರ ಸಂಘ ಸಲ್ಲಿಸುವ ಮನವಿಯನ್ನು ಪರಿಗಣಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಬನ್ನೇರುಘಟ್ಟ ರಸ್ತೆಯ ವಿಜಯಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ಎಸ್‌ಟಿಪಿ ಸ್ಥಾಪಿಸುವಂತೆ ಸೂಚಿಸಿ ಕೆಎಸ್‌ಪಿಸಿಬಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಅಪಾರ್ಟ್‌ಮೆಂಟ್ ಮಾಲಕರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠ ಇತ್ಯರ್ಥಪಡಿಸಿತು.
ನ್ಯಾಯಾಲಯದ ಆದೇಶದ ಪ್ರತಿ ಕೈಸೇರಿದ 1 ವಾರದೊಳಗೆ ಕೆಎಸ್‌ಪಿಸಿಬಿ ನೀಡಿರುವ ನೋಟಿಸ್‌ಗೆ ಅರ್ಜಿದಾರರು ಉತ್ತರಿಸಬೇಕು. ತದನಂತರ ಎಸ್‌ಟಿಪಿ ಸ್ಥಾಪನೆ ವಿಚಾರದ ಸಂಬಂಧ ತಮ್ಮ ಅಹವಾಲುಗಳನ್ನು ಕೆಎಸ್‌ಪಿಸಿಬಿಗೆ ಸಲ್ಲಿಸಬೇಕು. ಆ ಮನವಿಯನ್ನು ಕೆಎಸ್‌ಪಿಸಿಬಿ ಪರಿಗಣಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಬೆಳ್ಳಂದೂರು ಕೆರೆಗೆ ತ್ಯಾಜ್ಯ ನೀರು ಹರಿವು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿದ್ದ ಆದೇಶದ ಅನುಸಾರ, ಕೆರೆಗೆ ತ್ಯಾಜ್ಯ ನೀರು ಹರಿಸುತ್ತಿದ್ದ ಅಪಾರ್ಟ್‌ಮೆಂಟ್‌ಗಳಿಗೆ ನೋಟಿಸ್ ನೀಡಿದ್ದ ಕೆಎಸ್‌ಪಿಸಿಬಿ, ಎಸ್‌ಟಿಪಿ ಸ್ಥಾಪಿಸುವಂತೆ ಸೂಚಿಸಿತ್ತು.
ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಎಸ್‌ಟಿಪಿ ಸ್ಥಾಪಿಸಲು ಅಪಾರ್ಟ್‌ಮೆಂಟ್‌ನಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲ. ಜಲಮಂಡಳಿಯ ಒದಗಿಸಿರುವ ಒಳಚರಂಡಿ ಪೈಪ್‌ಲೈನ್‌ಗೆ ಅಪಾರ್ಟ್‌ಮೆಂಟ್ ಸಂಪರ್ಕ ಹೊಂದಿದ್ದು, ಅದರ ಮೂಲಕವೇ ತ್ಯಾಜ್ಯ ನೀರನ್ನು ಹೊರ ಬಿಡಲಾಗುತ್ತಿದೆ. ಯಾವುದೇ ಕೆರೆಗಳಿಗೆ ತ್ಯಾಜ್ಯ ನೀರು ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ನೋಟಿಸ್ ರದ್ದುಪಡಿಸಬೇಕೆಂದು ಕೋರಿದ್ದರು.