×
Ad

'ಬಂಗಾರದ ಎಲೆಗಳು': ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವದ ಯೋಜನೆ

Update: 2017-12-06 18:53 IST

ಬೆಂಗಳೂರು, ಡಿ.6: ಕರ್ನಾಟಕ ಸಾಹಿತ್ಯ ಅಕಾಡೆಮಿ ಬಂಗಾರದ ಎಲೆಗಳು ಎಂಬ ಯೋಜನೆಯಡಿ ಕ್ರಿ.ಶ 1820ರಿಂದ 2020ರವರೆಗೆ ನಾಡಿನಲ್ಲಿ ಸಾಹಿತ್ಯ ಸೇವೆ ಗೈದಿರುವ ಸಾಹಿತಿಗಳ ಸಂಪೂರ್ಣ ವಿವರವನ್ನು ದಾಖಲಿಸುವಂತಹ ಮಹತ್ವವಾದ ಯೋಜನೆಯೊಂದನ್ನು ರೂಪಿಸಲಾಗಿದೆ.

ಸಾಹಿತಿಯ ಭಾವಚಿತ್ರದಿಂದ ಪ್ರಾರಂಭಗೊಂಡು, ಸಾಹಿತಿಯ ಹೆಸರು, ಉಪನಾಮ, ಹುಟ್ಟಿದ ಸ್ಥಳ, ತಂದೆ-ತಾಯಿಗಳ ವಿವರ, ವಿದ್ಯಾಭ್ಯಾಸ, ಉದ್ಯೋಗ, ಕೃತಿಗಳ ಹೆಸರು, ಪ್ರಕಾರಗಳು, ಪ್ರಶಸ್ತಿ ಸೇರಿದಂತೆ ಪ್ರತಿಯೊಂದು ಅಂಶಗಳನ್ನು ದಾಖಲಿಸಲು ನಿರ್ಧರಿಸಲಾಗಿದೆ.

 ಯೋಜನೆಯ ಸ್ವರೂಪ: ಈ ಯೋಜನೆಯನ್ನು ಅಧ್ಯಯನಕ್ಕೆ ಅನುಕೂಲವಾಗುವಂತೆ ಬೆಂಗಳೂರು ಹಾಗೂ ಮೈಸೂರು ಎರಡು ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ. ಅದರಲ್ಲಿ ಬೆಂಗಳೂರು ವಿಭಾಗವು 1820ರಿಂದ 1920ರವರೆಗಿನ ಸಾಹಿತಿಗಳ ಕುರಿತ ಮಾಹಿತಿಯನ್ನು ದಾಖಲಿಸಿದರೆ, ಮೈಸೂರು ವಿಭಾಗವು 1920ರಿಂದ 2020ರವರೆಗಿನ ಸಾಹಿತಿಗಳ ವಿವರಗಳನ್ನು ಸಂಗ್ರಹಿಸಲಿದೆ.

ಬಂಗಾರದ ಎಲೆಗಳು ಯೋಜನೆ ಪರಿಣಾಮಕಾರಿಯಾಗಿ ರೂಪಿಸುವ ನಿಟ್ಟಿನಲ್ಲಿ ಹಿರಿಯ ವಿದ್ವಾಂಸರಾದ ಪ್ರೊ.ಬಿ.ಎ.ವಿವೇಕ ರೈ, ಪ್ರೊ.ಸಿ.ಎನ್.ರಾಮಚಂದ್ರನ್, ಡಾ.ಬರಗೂರು ರಾಮಚಂದ್ರಪ್ಪ ಹಾಗೂ ಡಾ.ಸಂಧ್ಯಾರೆಡ್ಡಿ ಒಳಗೊಂಡ ನಾಲ್ಕು ಮಂದಿ ಸಲಹಾ ಸಮಿತಿಯನ್ನು ರಚಿಸಲಾಗಿದೆ.

ಸಂಗ್ರಹ ಕಾರ್ಯದ ಮೂಲಗಳು: ಜಿಲ್ಲಾವಾರು ಕ್ಷೇತ್ರ ಸಂಗ್ರಹಕಾರರು ಪ್ರತಿ ಜಿಲ್ಲೆಯ ಒಬ್ಬರು ಕ್ಷೇತ್ರ ತಜ್ಞರನ್ನು ನೇಮಿಸಿ ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ಹುಟ್ಟಿದ, ವಾಸಿಸಿದ ಸಾಹಿತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಸಾಹಿತಿಗಳ ಕುರಿತ ನಿಗದಿತ ವಿವರಗಳನ್ನು ನಿರೀಕ್ಷಿಸುವ ನಮೂನೆಯನ್ನು ಆನ್‌ಲೈನ್ ವಿಧಾನದಿಂದ ಆಸಕ್ತರಿಂದಲೇ ವಿಷಯವನ್ನು ಸಂಗ್ರಹಿಸಬೇಕಾಗುತ್ತದೆ.

 ಮೈಸೂರು ವಿಭಾಗ: ಬಂಗಾರದ ಎಲೆಗಳು ಯೋಜನೆಯ ಮೈಸೂರು ವಿಭಾಗಕ್ಕೆ ಪ್ರೊ.ಡಿ.ಕೆ.ರಾಜೇಂದ್ರ ಸಂಪಾದಕರಾಗಿರುತ್ತಾರೆ. ಇವರೊಂದಿಗೆ ಡಾ.ಅಕ್ಕಮಹಾದೇವಿ, ಡಾ.ಎನ್.ಎನ್.ಚಿಕ್ಕಮಾದು, ಡಾ.ಟಿ.ಕೆ.ಕೆಂಪೇಗೌಡ, ಜೀನಹಳ್ಳಿ ಸಿದ್ಧಲಿಂಗಪ್ಪ, ಡಾ.ಜ್ಯೋತಿ ಶಂಕರ್ ಹಾಗೂ ಡಾ.ಬಿ.ವೆಂಕಟರಾಮಣ್ಣ ಕಾರ್ಯನಿರ್ವಹಿಸಲಿದ್ದಾರೆ.

 ಬೆಂಗಳೂರು ವಿಭಾಗಕ್ಕೆ ಶಾ.ಮಂ.ಕೃಷ್ಣರಾಯ ಯೋಜನಾ ಸಂಪಾದಕರಾಗಿದ್ದಾರೆ. ಇದರಲ್ಲಿ ಡಾ.ಎನ್.ಎಸ್.ತಾರನಾಥ್, ಪ್ರೊ.ಜಿ.ಅಶ್ವತ್ಥ ನಾರಾಯಣ, ಡಾ.ಟಿ.ಗೋವಿಂದರಾಜು ಹಾಗೂ ಬಿ.ಗೋ.ರಮೇಶ್ ಕಾರ್ಯನಿರ್ವಹಿಸಲಿದ್ದಾರೆ. ಇವರೊಂದಿಗೆ ರಾಜ್ಯದ ಪ್ರತಿ ಜಿಲ್ಲೆಯಿಂದಲೂ ಒಬ್ಬರು ಕ್ಷೇತ್ರ ಸಂಗ್ರಹಕಾರರಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News