ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ
ಬೆಂಗಳೂರು, ಡಿ.6: ಕ್ಷುಲ್ಲಕ ಕಾರಣಕ್ಕೆ ಮಗನೊಂದಿಗೆ ಜಗಳವಾಡುತ್ತಿದ್ದವರನ್ನು ಸಮಾಧಾನಪಡಿಸಲು ಮುಂದಾದ ತಂದೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿರುವ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಚಿಕ್ಕಮಾವಳ್ಳಿಯ ಪಾಪಯ್ಯ ಸ್ಟ್ರೀಟ್ ಮಾರಮ್ಮ ದೇವಸ್ಥಾನ ಸಮೀಪದ ನಿವಾಸಿ ಮುರುಗನ್(49) ಎಂಬುವರು ಇರಿತದಿಂದ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುರುಗನ್ ಅವರ ಮಗ ಶಬರಿ(23) ಎಂಬಾತ ಮಂಗಳವಾರ ರಾತ್ರಿ 9:45ರ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಚಿಕ್ಕಮಾವಳ್ಳಿಯ ಮನೆ ಸಮೀಪವೇ ಅಪರಿಚತರೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದ್ದಾರೆ. ಇದನ್ನು ಗಮನಿಸಿದ ಶಬರಿ ತಂದೆ ಮುರುಗನ್ ಸ್ಥಳಕ್ಕೆ ಬಂದು ಜಗಳ ಬಿಡಿಸಲು ಮುಂದಾದಾಗ ಆರೋಪಿಗಳು ಇವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇರಿತದಿಂದ ಗಾಯಗೊಂಡ ಮುರುಗನ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಕಲಾಸಿಪಾಳ್ಯ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.