×
Ad

ಚುನಾವಣೆಗೆ ಸ್ಪರ್ಧಿಸುವವರು ಸಂವಿಧಾನ ಪರೀಕ್ಷೆ ಬರೆಯಬೇಕು: ಬೇಲಿಮಠ ಶಿವರುದ್ರ ಸ್ವಾಮೀಜಿ

Update: 2017-12-06 19:59 IST

  ಬೆಂಗಳೂರು, ಡಿ.6: ಚುನಾವಣೆಗೆ ಸ್ಪರ್ಧಿಸುವವರು ಸಂವಿಧಾನ ಕುರಿತು ಪರೀಕ್ಷೆ ಬರೆಯುವ ಅಗತ್ಯವಿದೆ ಎಂದು ಬೇಲಿಮಠ ಮಹಾಸಂಸ್ಥಾನದ ಶಿವರುದ್ರ ಸ್ವಾಮೀಜಿ ಇಂದಿಲ್ಲಿ ಹೇಳಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಬುಧವಾರ ನಗರದ ಮಹಾರಾಷ್ಟ್ರ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 61ನೆ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ‘ಸಂವಿಧಾನ ಬದಲಾವಣೆ ವಾದ ಎಷ್ಟು ಸಮಂಜಸ?’ ಕುರಿತು ಏರ್ಪಡಿಸಿದ್ದ ಚರ್ಚಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ವಾಹನ ಸವಾರರಿಗೆ ಪರೀಕ್ಷೆ ನಡೆಸುವ ಮಾದರಿಯಲ್ಲಿಯೇ ಚುನಾವಣೆಗೆ ಸ್ಪರ್ಧಿಸುವವರು ಸಂವಿಧಾನದ ಕುರಿತ ಪರೀಕ್ಷೆಯನ್ನು ಎದುರಿಸಬೇಕು. ಚುನಾವಣಾ ಆಯೋಗ ಚುನಾವಣೆ ಸಂದರ್ಭಗಳಲ್ಲಿ ಸಂವಿಧಾನ ಕುರಿತ ಪರೀಕ್ಷೆ ಆಯೋಜಿಸಬೇಕು. ಈ ಪರೀಕ್ಷೆಯಲ್ಲಿ ಪಾಸಾದವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಹೇಳಿದರು.

 ಶಾಲಾ-ಕಾಲೇಜು ಮಟ್ಟದಲ್ಲಿ ಮಕ್ಕಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಬೇಕಿದೆ. ಹಣ ಖರ್ಚು ಮಾಡಿ ಜನರ ಗುಂಪು ಕಟ್ಟಿಕೊಂಡು ಶಾಸಕ ಅಥವಾ ಸಂಸದ ಆಗುವುದರಲ್ಲಿ ಅರ್ಥವಿಲ್ಲ ಎಂದ ಅವರು, ಸಂವಿಧಾನದ ತಿಳಿವಳಿಕೆ ಇಲ್ಲದ ಈ ರಾಜಕಾರಣಿಗಳು ಅಧಿವೇಶನಗಳಲ್ಲಿ ಸಭಾತ್ಯಾಗ ಮಾಡಿ ಕಾಲಾಹರಣ ಮಾಡುತ್ತಾರೆ ಎಂದು ತಿಳಿಸಿದರು.

ಸಂವಿಧಾನದ ಅಂಗಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಬಗ್ಗೆ ಕನಿಷ್ಟ ಜ್ಞಾನವೂ ಇರುವುದಿಲ್ಲ. ಇವರಿಂದ ಶಾಸನ, ಕಾಯ್ದೆ ರಚನೆ ಸಾಧ್ಯವಿಲ್ಲ. ಹಾಗಾಗಿ ಈ ದೇಶಕ್ಕೆ ಸಂವಿಧಾನದ ತಿಳಿವಳಿಕೆ ಇರುವ ಶಾಸಕ-ಸಂಸದರ ಅಗತ್ಯವಿದೆ. ಅಲ್ಲದೆ, ಸಂವಿಧಾನದ ಬಗ್ಗೆ ತಿಳಿದುಕೊಂಡು ಸಂವಿಧಾನಾತ್ಮಕವಾಗಿಯೇ ಆರಿಸಿಬರಬೇಕು. ಪ್ರತಿಯೊಬ್ಬರು ಸಂವಿಧಾನ ಬಗ್ಗೆ ಜಾಗೃತರಾಗಬೇಕು ಎಂದು ಶಿವರುದ್ರ ಸ್ವಾಮೀಜಿ ನುಡಿದರು.

ಪೇಜಾವರರದು ದೇಶ ಒಡೆಯುವ ಹುನ್ನಾರ

ಉಡುಪಿಯ ಧರ್ಮ ಸಂಸದ್‌ನಲ್ಲಿ ಸಂವಿಧಾನ ಬದಲಾವಣೆ ಕುರಿತು ಚರ್ಚೆ ನಡೆದಿದೆ. ಸಂವಿಧಾನ ಸರ್ವ ಶ್ರೇಷ್ಠ ಎಂದು ದೇಶವೇ ಒಪ್ಪಿಕೊಂಡಿರುವಾಗ ಪೇಜಾವರ ಶ್ರೀ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ದೇಶ ಒಡೆಯುವ ಹುನ್ನಾರ.

ಡಾ.ಎನ್.ಮೂರ್ತಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News