ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಘೋಷಣೆ ಖಚಿತ?

Update: 2017-12-06 15:52 GMT

ಜೆರುಸಲೇಂ, ಡಿ. 6: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿಯಾಗಿ ಘೋಷಿಸುವುದು ಬಹುತೇಕ ಖಚಿತವಾಗಿದೆ. ಆದರೆ, ಅಮೆರಿಕದ ಈ ಕ್ರಮವು ಈ ವಲಯದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಸೃಷ್ಟಿಸುವುದು ಕೂಡಾ ಅಷ್ಟೇ ಖಚಿತವಾಗಿದೆ.

 ಜೆರುಸಲೇಂ ಮೇಲೆ ನೀಡಲಾಗುವ ಪೂರ್ಣ ನಿಯಂತ್ರಣವನ್ನು ಅಮೆರಿಕದ ಅತ್ಯಂತ ಆಪ್ತ ದೇಶವಾಗಿರುವ ಇಸ್ರೇಲ್ ಸ್ವಾಗತಿಸುತ್ತದೆ. ಅದೂ ಅಲ್ಲದೆ, ಈ ನಿರ್ಧಾರವನ್ನು ಅಮೆರಿಕದ ಇಸ್ರೇಲ್ ಪರ ಇವ್ಯಾಂಜಲಿಕಲ್ ಕ್ರೈಸ್ತರೂ ಸ್ವಾಗತಿಸುತ್ತಾರೆ. ಟ್ರಂಪ್‌ರ ಗಣನೀಯ ಪ್ರಮಾಣದ ಮತದಾರರೂ ಇವರೇ ಆಗಿದ್ದಾರೆ.

ಆದರೆ, ಈ ನಿರ್ಧಾರವು ಈ ವಲಯದಲ್ಲಿ ಹಿಂಸಾಚಾರಕ್ಕೆ ಕಾರಣವಾಗಬಹುದಾಗಿದೆ ಹಾಗೂ ಅಮೆರಿಕ ಮಧ್ಯಸ್ತಿಕೆಯಲ್ಲಿ ರೂಪುಗೊಳ್ಳುತ್ತಿರುವ ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಗೆ ಚಾಲನೆ ಸಿಗುವ ಮೊದಲೇ ಅದನ್ನು ಅಪ್ರಸ್ತುತಗೊಳಿಸುವ ಸಾಧ್ಯತೆಯಿದೆ. ಅದೇ ವೇಳೆ, ಅರಬ್ ಜಗತ್ತು ಮತ್ತು ಪಶ್ಚಿಮದಲ್ಲಿರುವ ಅಮೆರಿಕದ ಪ್ರಮುಖ ಮಿತ್ರದೇಶಗಳ ಆಕ್ರೋಶಕ್ಕೆ ಕಾರಣವಾಗಬಹುದಾಗಿದೆ.

ಜೆರುಸಲೇಂ ಯಾಕೆ ಸೂಕ್ಷ್ಮ ವಿಷಯವಾಯಿತು?

ಇಡೀ ಜೆರುಸಲೇಂ ತನ್ನ ರಾಜಧಾನಿಯೆಂದು ಇಸ್ರೇಲ್ ಹೇಳಿಕೊಳ್ಳುತ್ತಿದೆ. ಅದೇ ವೇಳೆ, 1967ರ ಮಧ್ಯಪ್ರಾಚ್ಯ ಯುದ್ಧದ ಅವಧಿಯಲ್ಲಿ ಇಸ್ರೇಲ್ ವಶಪಡಿಸಿಕೊಂಡಿರುವ ಜೆರುಸಲೇಂನ ಪೂರ್ವ ಭಾಗ ತನ್ನ ಭವಿಷ್ಯದ ಸ್ವತಂತ್ರ ದೇಶದ ರಾಜಧಾನಿ ಎಂಬುದಾಗಿ ಫೆಲೆಸ್ತೀನ್ ಹೇಳಿಕೊಳ್ಳುತ್ತಿದೆ.

ಉಭಯ ದೇಶಗಳ ಈ ವಿರುದ್ಧ ನಿಲುವುಗಳೇ ದಶಕಗಳಿಂದ ನಡೆಯುತ್ತಿರುವ ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಪ್ರಮುಖ ಕಾರಣವಾಗಿದೆ.

ಸಂಘರ್ಷದ ಮೂಲ ಜೆರುಸಲೇಂ ಹಳೆ ನಗರದಲ್ಲಿದೆ. ಇಲ್ಲಿ ಅತ್ಯಂತ ಮಹತ್ವದ ಕ್ರೈಸ್ತ, ಮುಸ್ಲಿಮ್, ಯಹೂದಿ ಪವಿತ್ರ ಕ್ಷೇತ್ರಗಳಿವೆ.

‘ಟೆಂಪಲ್ ವೌಂಟ್’ ಎಂಬುದಾಗಿ ಯಹೂದಿಯರು ಕರೆಯುವ ಇಲ್ಲಿನ ಸ್ಥಳದಲ್ಲಿ ಬೈಬಲ್‌ನಲ್ಲಿ ಉಲ್ಲೇಖಿಸಲ್ಪಟ್ಟಿರುವ ಯಹೂದಿ ದೇವಾಲಯಗಳು ಸಾವಿರಾರು ವರ್ಷಗಳಿಂದ ಇವೆ. ಈ ಸ್ಥಳವನ್ನು ಯಹೂದಿ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರ ಎಂಬುದಾಗಿ ಪರಿಗಣಿಸಲಾಗಿದೆ.

ಇಲ್ಲೇ ಇಸ್ಲಾಮ್‌ನ ಮೂರನೆ ಅತ್ಯಂತ ಪವಿತ್ರ ಕ್ಷೇತ್ರವಾಗಿರುವ ‘ಅಲ್ ಅಕ್ಸ ಮಸೀದಿ’ಯೂ ಇದೆ. ಚಿನ್ನದ ಬಣ್ಣದ ‘ಡೋಮ್ ಆಫ್ ದ ರಾಕ್’ ಕೂಡಾ ಇಲ್ಲೇ ಇದೆ.

ಅಂತಾರಾಷ್ಟ್ರೀಯ ಸಮುದಾಯದ ವಿರೋಧ

ಜೆರುಸಲೇಂ ನಗರದ ಮೇಲೆ ಇಸ್ರೇಲ್ ನಿಯಂತ್ರಣ ಹೊಂದಿದೆ ಹಾಗೂ ಅದರ ಸರಕಾರವೂ ಇಲ್ಲೇ ನೆಲೆಸಿದೆ. ಆದರೆ, ನಗರಕ್ಕೆ ಪೂರ್ವ ಜೆರುಸಲೇಂನ ಸೇರ್ಪಡೆಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿಲ್ಲ.

 ಜೆರುಸಲೇಂನ ಅಂತಿಮ ಸ್ಥಿತಿಗತಿಯನ್ನು ಮಾತುಕತೆಗಳ ಮೂಲಕ ನಿರ್ಧರಿಸಬೇಕು ಎಂಬುದಾಗಿ ಅಂತಾರಾಷ್ಟ್ರೀಯ ಸಮುದಾಯ ಒಕ್ಕೊರಲಿನಿಂದ ಹೇಳುತ್ತದೆ.

ಟ್ರಂಪ್‌ರ ಚುನಾವಣಾ ಭರವಸೆ

2016ರ ಚುನಾವಣೆಯ ವೇಳೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಬಲ ಇಸ್ರೇಲ್ ಪರ ನಿಲುವನ್ನು ತೆಗೆದುಕೊಂಡಿದ್ದರು ಹಾಗೂ ಅಮೆರಿಕದ ರಾಯಭಾರ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೇಂಗೆ ವರ್ಗಾಯಿಸುವ ಭರವಸೆ ನೀಡಿದ್ದರು.

ಹೆಚ್ಚಿನ ದೇಶಗಳ ರಾಯಭಾರ ಕಚೇರಿಗಳು ಟೆಲ್ ಅವೀವ್‌ನಲ್ಲಿವೆ.

ಇಂಥ ವಿಷಯಗಳ ಬಗ್ಗೆ ಮಾತನಾಡುವುದು ಸುಲಭ ಹಾಗೂ ಅವುಗಳನ್ನು ಜಾರಿಗೊಳಿಸುವುದು ಕಷ್ಟ ಎಂಬುದನ್ನು ಅಧಿಕಾರಕ್ಕೆ ಬಂದ ಬಳಿಕ ಟ್ರಂಪ್ ಅರಿತುಕೊಂಡಿದ್ದಾರೆ.

ಯಥಾಸ್ಥಿತಿ ಕಾಯ್ದುಕೊಳ್ಳಲು ಪೋಪ್ ಕರೆ

 ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಘೋಷಿಸಲು ಅಮೆರಿಕ ಎಲ್ಲ ಏರ್ಪಾಡುಗಳನ್ನು ಮಾಡಿರುವಂತೆಯೇ, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಪೋಪ್ ಫ್ರಾನ್ಸಿಸ್ ಬುಧವಾರ ಕರೆ ನೀಡಿದ್ದಾರೆ.

‘‘ಇತ್ತೀಚಿನ ದಿನಗಳಲ್ಲಿ ರೂಪುಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ನನ್ನಲ್ಲಿ ಉಂಟಾಗಿರುವ ಕಳವಳವನ್ನು ನಾನು ಹತ್ತಿಕ್ಕಲಾರೆ. ಅದೇ ವೇಳೆ, ವಿಶ್ವಸಂಸ್ಥೆಯ ನಿರ್ಣಯಗಳಿಗನುಗುಣವಾಗಿ ನಗರದ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸಂಬಂಧಪಟ್ಟ ಎಲ್ಲರಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ’’ ಎಂದು ತನ್ನ ವಾರದ ಭಾಷಣದಲ್ಲಿ ಪೋಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News