×
Ad

ರಾಷ್ಟ್ರಪತಿ ಅಂಕಿತಕ್ಕೆ ರವಾನೆ: ಕಾನೂನು ಸಚಿವ ಜಯಚಂದ್ರ

Update: 2017-12-07 18:23 IST

ಬೆಂಗಳೂರು, ಡಿ. 7: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಭಡ್ತಿ ಮೀಸಲಾತಿ ಸಂಬಂಧದ ಮಸೂದೆಯನ್ನು ರಾಷ್ಟ್ರಪತಿ ಒಪ್ಪಿಗೆಗೆ ಕಳುಹಿಸಿಕೊಡುವಂತೆ ರಾಜ್ಯಪಾಲರು ಸಲಹೆ ಮಾಡಿದ್ದು, ಶೀಘ್ರದಲ್ಲೆ ರಾಷ್ಟ್ರಪತಿಗಳಿಗೆ ರವಾನಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾನಾಡಿದ ಅವರು, ರಾಜ್ಯಪಾಲರ ಸೂಚನೆ ಹಿನ್ನೆಲೆಯಲ್ಲಿ ಶೀಘ್ರವೇ ರಾಷ್ಟ್ರಪತಿಗೆ ಮಸೂದೆಯನ್ನು ಗೃಹ ಸಚಿವಾಲಯದ ಮೂಲಕ ರವಾನಿಸಲಾಗುವುದು. ಅದಕ್ಕೊ ಮೊದಲು ರಾಜ್ಯದ ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನು ಪಡೆಯಲಾಗುವುದು ಎಂದರು.

ಪರಿಶಿಷ್ಟ ಅಧಿಕಾರಿಗಳು ಮತ್ತು ನೌಕರರ ಸೇವಾ ಜೇಷ್ಠತೆ ಸಂರಕ್ಷಿಸುವ ಮಸೂದೆ ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದ ಉಭಯ ಸದನಗಳಲ್ಲಿ ಅನುಮೋದನೆ ಆಗಿತ್ತು. ರಾಜ್ಯಪಾಲರ ಅಂಕಿತಕ್ಕೆ ಮಸೂದೆ ರವಾನಿಸಿದ್ದು, ಅವರು ಮಸೂದೆ ಪರಿಶೀಲಿಸಿ ರಾಷ್ಟ್ರಪತಿ ರವಾನಿಸಲು ಸೂಚಿಸಿದ್ದಾರೆ ಎಂದು ತಿಳಿಸಿದರು.

ಪವಿತ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ವಿಧೇಯಕವನ್ನು ರೂಪಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಲಾಗಿತ್ತು. ಇದನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು. ಆದರೆ, ಅವರು ಈ ವಿಚಾರದಲ್ಲಿ ರಾಜ್ಯಪಾಲರು ಸರಕಾರಕ್ಕೆ ಸಲಹೆ ನೀಡಿದ್ದಾರೆ ಎಂದರು.

ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲು ಸಲಹೆ ಮಾಡಿದ್ದು, ಮತ್ತೆ ಇನ್ನಾವುದೇ ಸೂಚನೆ ನೀಡಿಲ್ಲ. ಜ.15ರೊಳಗೆ ಜೇಷ್ಠತೆ ಪಟ್ಟಿಯನ್ನು ಸಿದ್ಧಪಡಿಸಬೇಕಿದ್ದು, ಅಷ್ಟರೊಳಗಾಗಿ ಉದ್ದೇಶಿತ ಮಸೂದೆಗೆ ಅಂಗೀಕಾರ ಪಡೆಯಲು ಸರಕಾರ ಪ್ರಯತ್ನ ನಡೆಸಲಿದೆ ಎಂದು ಜಯಚಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News