×
Ad

4,450 ರೂ.ಬೆಂಬಲ ಬೆಲೆಯಡಿ ಶೆಂಗಾ ಖರೀದಿ: ಕಾನೂನು ಸಚಿವ ಜಯಚಂದ್ರ

Update: 2017-12-07 18:25 IST

ಬೆಂಗಳೂರು, ಡಿ. 7: ಶೆಂಗಾ(ನೆಲಗಡಲೆ) ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶಕ್ಕೆ ಸರಕಾರ ನಿರ್ಧರಿಸಿದ್ದು, ಪ್ರತಿ ಕ್ವಿಂಟಾಲ್‌ಗೆ 4,450 ರೂ.ಬೆಂಬಲ ಬೆಲೆ ನೀಡಿ ಖರೀದಿಸಲು, ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆದಿರುವ ಶೇಂಗಾ ಬೆಲೆ ಕುಸಿದಿದ್ದು, ರಾಜ್ಯ ಸರಕಾರ ಮಧ್ಯ ಪ್ರವೇಶ ಮಾಡಲಿದೆ ಎಂದರು.
ರಾಜ್ಯದಲ್ಲಿ 40 ಖರೀದಿಗೆ ಕೇಂದ್ರಗಳನ್ನು ಆರಂಭಿಸಲಿದ್ದು, ರೈತರು 15 ದಿನಗಳೊಳಗೆ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಒಣ ಶೇಂಗಾವನ್ನು ಮಾತ್ರ ಖರೀದಿ ಕೇಂದ್ರಕ್ಕೆ ಪೂರೈಸಬೇಕೆಂದ ಅವರು, ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿಗೆ 25 ಕೋಟಿ ರೂ.ಬಿಡುಗಡೆ ಮಾಡಿದೆ ಎಂದರು.

ಕೇಂದ್ರಕ್ಕೆ ಮನವಿ: ಹೈ.ಕ. ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ತೊಗರಿ ಬೆಳೆ ನಿರೀಕ್ಷೆ ಮೀರಿ ಬೆಳೆದಿದ್ದು, ಪ್ರಸಕ್ತ ಸಾಲಿನಲ್ಲಿ 7ಲಕ್ಷ ಮೆಟ್ರಿಕ್ ಟನ್ ಬೆಳೆ ಬರುವ ಸಾಧ್ಯತೆಗಳಿವೆ. ಹೀಗಾಗಿ ಪ್ರತಿ ಕ್ವಿಂಟಾಲ್‌ಗೆ 5,450 ರೂ.ನಂತೆ ಕನಿಷ್ಟ ಬೆಂಬಲ ಆಧಾರದ ವೆುೀಲೆ ಖರೀದಿಸಲು ಅನುಮೋದನೆ ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು.

 ರಾಜ್ಯದಲ್ಲಿಯೂ ಅಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಈ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಅವಕಾಶ ಕೋರಲಾಗಿದೆ. ಕೇಂದ್ರ ಸರಕಾರ ತೊಗರಿ ಮತ್ತು ಮೆಕ್ಕೆಜೋಳಕ್ಕೆ ಇನ್ನೂ ಅನುಮತಿಯನ್ನು ನೀಡಿಲ್ಲ ಎಂದು ಜಯಚಂದ್ರ ಸ್ಪಷ್ಟಣೆ ನೀಡಿದರು.
ಕನಿಷ್ಟ ಬೆಂಬಲ ಬೆಲೆ ಆಧಾರದ ಮೇಲೆ ವಿವಿಧ ದವಸ-ಧಾನ್ಯಗಳನ್ನು ಖರೀದಿಸಿದ್ದು, ಕೇಂದ್ರ ಸರಕಾರ, ಕರ್ನಾಟಕಕ್ಕೆ ನೀಡಬೇಕಿರುವ 1,387 ಕೋಟಿ ರೂ.ಬಾಕಿಯನ್ನು ಈವರೆಗೂ ನೀಡಿಲ್ಲ. ಈ ಸಂಬಂಧ ಪ್ರಧಾನಿ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರಿಗೆ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News