×
Ad

ಏಕರೂಪದ ‘ಅಂಕಪಟ್ಟಿ’ ಒದಗಿಸಲು ಕ್ರಮ:ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ

Update: 2017-12-07 18:35 IST

ಬೆಂಗಳೂರು, ಡಿ. 7: ಕಳಪೆ ಕಾಗದದ ‘ಅಂಕಪಟ್ಟಿ’ ಪೂರೈಕೆ ಸಂಬಂಧ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಲಾಗುವುದು. ಅಲ್ಲದೆ, ಎಲ್ಲ ವಿಶ್ವ ವಿದ್ಯಾಲಯಗಳು ಏಕರೂಪದ ಅಂಕಪಟ್ಟಿ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಮ್ಮ ಪಕ್ಷದ ಕೆಲವರು ಭ್ರಷ್ಟಾಚಾರದ ಆರೋಪ ಮಾಡಿದ್ದು, ಅವರಿಗೆ ಸೂಕ್ತ ಮಾಹಿತಿಯೇ ಇಲ್ಲ. ಆರೋಪ ಸತ್ಯಕ್ಕೆ ದೂರ ಎಂದು ತಳ್ಳಿಹಾಕಿದರು.

‘ಅಂಕಪಟ್ಟಿ’ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಆಯಾ ವಿ.ವಿ.ಗಳೇ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತವೆ. ಉತ್ಕೃಷ್ಟ ಗುಣಮಟ್ಟ ಕಾಗದದ ಅಂಕಪಟ್ಟಿ ನೀಡುವ ಬಗ್ಗೆ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಹೀಗಾಗಿ ಎಂಎಸ್‌ಐಎಲ್‌ಗೆ ವಹಿಸಲಾಗಿತ್ತು ಎಂದರು.

ಭ್ರಷ್ಟಾಚಾರ ನಡೆಸಿ, ಹಣ ಮಾಡಲು ತಾನು ರಾಜಕೀಯಕ್ಕೆ ಬಂದಿಲ್ಲ. ಸಮಾಜಕ್ಕೆ ಸೇವೆ ಮಾಡುವ ಮನೋಭಾವನೆಯಿಂದ ಇಲ್ಲಿಗೆ ಬಂದಿದ್ದೇನೆ. 35 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ ಎಂದ ಅವರು, ನನ್ನ ಅಂದಾಜಿನ ಪ್ರಕಾರ ಈ ಆರೋಪದ ಹಿಂದೆ ಕಾಗದ ಪೂರೈಕೆ ಗುತ್ತಿಗೆದಾರರ ಕೈವಾಡ ಇರಬಹುದು ಎಂದು ಸಂಶಯಪಟ್ಟರು.

ಸರಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮೂಲಕ ‘ಲೇಖಕ್’ ಬ್ರಾಂಡ್‌ನ ಉತ್ಕೃಷ್ಟ ಗುಣಮಟ್ಟದ ಕಾಗದಲ್ಲಿ ಅಂಕಪಟ್ಟಿ ಒದಗಿಸುವ ಸಂಬಂಧ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ನಿರ್ಧರಿಸಿದ್ದು, ವಿಶ್ವ ವಿದ್ಯಾಲಯಗಳೇ ಈ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಮಾಡಿವೆ ಎಂದರು.
ಅತ್ಯಂತ ಪಾರದರ್ಶಕವಾಗಿ ಎಂಎಸ್‌ಐಎಲ್ ಪತ್ರಿಕೆಗಳಿಗೆ ಜಾಹೀರಾತು ನೀಡಿ ಟೆಂಡರ್ ಆಹ್ವಾನಿಸಿ ಆರ್‌ಬಿಐ ಮಾನ್ಯತೆಯುಳ್ಳ ಮುಂಬೈ ಮೂಲದ ಸಂಸ್ಥೆಗೆ ಗುತ್ತಿಗೆ ನೀಡಿದೆ. ಇದರಲ್ಲಿ ಉನ್ನತ ಶಿಕ್ಷಣ ಇಲಾಖೆ ಯಾವುದೇ ಪಾತ್ರವೂ ಇಲ್ಲ. ಒಂದು ವೇಳೆ ಆ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಖುದ್ದು ಭೇಟಿ ಮಾಡುವೆ: ರಾಜ್ಯಪಾಲರ ಮೇಲೆ ಅಪಾರ ಗೌರವವಿದೆ. ಕುಲಪತಿಗಳ ನೇಮಕ ಸಂಬಂಧ ಮುಖ್ಯಮಂತ್ರಿ ಯಾವುದೇ ಪ್ರಶ್ನೆಯನ್ನೂ ಕೇಳಿಲ್ಲ. ರಾಜ್ಯಪಾಲರು ಪತ್ರ ಬರೆದಿದ್ದಾರೆಂಬುದು ನನಗೆ ಗೊತ್ತಿಲ್ಲ. ಶೀಘ್ರದಲ್ಲೆ ತಾನು ರಾಜ್ಯಪಾಲರನ್ನು ಖುದ್ದು ಭೇಟಿ ಮಾಡುತ್ತೇನೆ ಎಂದು ರಾಯರೆಡ್ಡಿ ಹೇಳಿದರು.

‘ತನ್ನ ವಿರುದ್ಧ ಸೂಕ್ತ ಮಾಹಿತಿಯೇ ಇಲ್ಲದೆ ಕಾಂಗ್ರೆಸ್ ಉಸ್ತುವಾರಿಗೆ ದೂರು ನೀಡಿದ ವ್ಯಕ್ತಿ ತನ್ನ ಬಳಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಕ್ಯಾರಿ ಓವರ್ ಮೂಲಕ ಉತ್ತೀರ್ಣ ಮಾಡಿಸಿ ಎಂದಿದ್ದ, ನಾನು ಅದಕ್ಕೆ ಸೊಪ್ಪು ಹಾಕಲಿಲ್ಲ. ಈ ಬಗ್ಗೆ ಉಸ್ತುವಾರಿ, ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗೂ ಸೂಕ್ತ ಮಾಹಿತಿ ನೀಡುವೆ’
-ಬಸವರಾಜ ರಾಯರೆಡ್ಡಿ ಉನ್ನತ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News