×
Ad

ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಯುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಗೆ ಹೆದರುವ ಅಗತ್ಯವಿಲ್ಲ: ಉಮಾಶ್ರೀ

Update: 2017-12-07 18:39 IST

ಬೆಂಗಳೂರು, ಡಿ.7: ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಯುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಗಳಿಗೆ ಹೆದರುವ, ಅಂಜುವ ಅಗತ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು.

ಬುಧವಾರ ಕರ್ನಾಟಕ ಸಾಹಿತ್ಯ ಅಕಾಡಮಿ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ 'ದಲಿತ ಕ್ರೈಸ್ತ ಅಧ್ಯಯನ', 'ಬಂಗಾರದ ಎಲೆಗಳು', 'ವಜ್ರದ ಬೇರುಗಳು' ಸೇರಿದಂತೆ ಸಾಹಿತ್ಯ ಅಕಾಡಮಿಯ ಐದು ಯೋಜನೆಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿವೆ. ಜನತೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಲು ಭಯ ಪಡುತ್ತಿದ್ದಾರೆ. ಇಂತಹ ವಾತಾವರಣಕ್ಕೆ ಕಾರಣರಾಗಿರುವ ಪಟ್ಟಭದ್ರರ ವಿರುದ್ಧ ಜನಸಾಮಾನ್ಯರು ಒಟ್ಟಾಗಿ, ಹೋರಾಟ ಮಾಡಬೇಕಾಗಿದೆ ಎಂದು ಅವರು ಆಶಿಸಿದರು.

ಸಹನೆ ಇಲ್ಲದವರು, ವಿಚಾರಗಳನ್ನು ಅರ್ಥೈಸಿಕೊಳ್ಳಲಾರದವರು ಅಭಿವ್ಯಕ್ತಿ ಸ್ವಾತಂತ್ರವನ್ನು ಮೊಟಕುಗೊಳಿಸುತ್ತಿದ್ದಾರೆ. ಈ ಪಟ್ಟಭದ್ರರು ಈಗ ಹುಟ್ಟಿದವರಲ್ಲ. ಜಗತ್ತಿನ ಹಿರಿಯ ತತ್ವಜ್ಞಾನಿಗಳಾದ ಪ್ಲೇಟೊ, ಸಾಕ್ರಟೀಸ್‌ನಿಂದ ಮೊದಲುಗೊಂಡು ಸಮಕಾಲೀನ ಸಾಹಿತಿ, ವಿಚಾರವಾದಿಗಳಿಗೆ ಬೆದರಿಕೆ ಒಡ್ಡುತ್ತಲೇ ಬಂದಿದ್ದಾರೆ. ಇವರಿಗೆ ವೈಚಾರಿಕತೆಯಿಂದಲೇ ತಕ್ಕ ಪಾಠ ಕಲಿಸುವ ಪ್ರಕ್ರಿಯೆಯೂ ಜೊತೆ ಜೊತೆಯಾಗಿಯೇ ನಡೆಯುತ್ತಿದೆ ಎಂದು ಅವರು ಹೇಳಿದರು.

ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ,  ಸಾಹಿತ್ಯ, ಜಾನಪದ, ಸಂಗೀತ ಸೇರಿದಂತೆ ಯಾವುದೇ ಅಕಾಡೆಮಿಗಳು ಹಂಗಿನ ಅರಮನೆಯಲ್ಲ. ಈ ಅಕಾಡೆಮಿಗಳು ಸರಕಾರಿ ಶೈಲಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಅಕಾಡೆಮಿಗಳಿಗೆ ಸ್ವಾಯತ್ತತೆ ಇದ್ದರೆ ಮಾತ್ರ ಪರಿಣಾಮಕಾರಿಯಾಗಿ ಕೆಲ ಮಾಡಲು ಸಾಧ್ಯವೆಂದು ತಿಳಿಸಿದರು.

ಅಕಾಡೆಮಿಯ ನೌಕರರಿಗೆ ಸಂಬಳ ಹೆಚ್ಚಾಗಲಿ: ಸಾಂಸ್ಕೃತಿಕವಾಗಿ ಕೆಲಸ ಮಾಡುವ ಅಕಾಡೆಮಿಗಳು ಅಲ್ಲಿ ಕೆಲಸ ಮಾಡುವ ನೌಕರರಿಗೆ ಸೂಕ್ತ ಸಂಬಳ, ಸೌಲಭ್ಯಗಳ ಹೆಚ್ಚಿಸಬೇಕು. ಈ ಸಂಬಂಧ ಅಕಾಡೆಮಿಗಳ ಅಧ್ಯಕ್ಷರು ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಮಾತನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ರಾಜ್ಯದ ಏಳು ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಹೀಗಾಗಿ ಅಕಾಡೆಮಿಯನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ತಿಳಿಸಿದರು.

ಪ್ರತಿರೋಧವನ್ನು ವ್ಯಕ್ತಿಪಡಿಸುವುದೇ ಕನ್ನಡ ಸಾಹಿತ್ಯ ಪರಂಪರೆಯ ಸಾರವಾಗಿದೆ. ಹೀಗಾಗಿ ಪಟ್ಟಭದ್ರ ಹಿತಾಸಕ್ತಿಗಳು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ದಾಳಿ ನಡೆಸಿದರೂ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಕನ್ನಡ ಸಾಹಿತಿಗಳಿಗೆ, ಪ್ರಗತಿಪರ ಚಿಂತಕರಿಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಹುಸಿ ಸಾಂಸ್ಕೃತಿಕ ಸಾಹಿತಿಗಳ ಅಬ್ಬರದಿಂದಾಗಿ ಸಾಹಿತ್ಯ ಪರಂಪರೆಯ ಕುರಿತು ತಪ್ಪು ಸಂದೇಶಗಳು ರವಾನೆಯಾಗುತ್ತಿವೆ. ಇಂತಹ ಹುಸಿ ಸಾಹಿತಿಗಳನ್ನು ಗುರುತಿಸಿ, ದೂರ ಇಡಬೇಕಾಗಿದೆ.

ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News