×
Ad

ಕಾಂಗ್ರೆಸ್ ಮುಖಂಡರ ಪ್ರತ್ಯೇಕ ಪ್ರವಾಸಕ್ಕೆ ಎಚ್‌ಡಿಕೆ ವ್ಯಂಗ್ಯ

Update: 2017-12-07 18:58 IST

ಬೆಂಗಳೂರು, ಡಿ.7: ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ, ಕಾಂಗ್ರೆಸ್ ಶಾಸಕರು ಇರದೆ ಇರೊ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ಪ್ರವಾಸ, ಬಂಡಾಯದ ಬಿಸಿ ಇರುವ ಕ್ಷೇತ್ರಗಳಲ್ಲಿ ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಗುರುವಾರ ನಗರದ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಸೇರುವಂತೆ ಬಿಜೆಪಿ-ಕಾಂಗ್ರೆಸ್‌ನ ಯಾವ ಮುಖಂಡರಿಗೂ ನಾನು ಆಹ್ವಾನ ನೀಡಿಲ್ಲ. ನಾಡಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರೇ ಆದರೂ ಕೈ ಜೋಡಿಸುತ್ತೇನೆ. ಆದರೆ, ನಾನಾಗಿ ಯಾರನ್ನೂ ಹುಡುಕಿಕೊಂಡು ಹೋಗಲ್ಲ ಎಂದರು.

ಅಧಿಕಾರಕ್ಕೆ ಬಂದ ನಾಲ್ಕೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಉತ್ತರ ಕರ್ನಾಟಕದ ಪ್ರವಾಸ ಪ್ರಾರಂಭಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅವರಿಗೆ ಉತ್ತರ ಕರ್ನಾಟಕ ನೆನಪಾಗಿದೆ. ಭಟ್ಕಳದಲ್ಲಿ 1,500 ಕೋಟಿ ರೂ.ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಅಲ್ಲದೆ, ಇಂತಹ ಚುನಾವಣಾ ಪ್ರಚಾರಕ್ಕೆ ಜಿಲ್ಲಾಡಳಿತದಿಂದಲೆ ಕಾರ್ಯಕ್ರಮ ಆಯೋಜನೆಗೆ ನೂರಾರು ಕೋಟಿ ರೂ.ಟೆಂಡರ್ ಕರೆದಿದ್ದಾರೆ. ಇಡೀ ದೇಶದಲ್ಲಿ ಇಂತಹ ಘಟನೆ ನಡೆದಿಲ್ಲ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕುಡುಕರ ಜೇಬಿಗೆ ಪಿಕ್ ಪಾಕೆಟ್ ಮಾಡುತ್ತಿರುವ ಸರಕಾರವಿದ್ದು, 10 ರೂ.ಗಳ ಮದ್ಯದ ಮೇಲೆ ಮನ ಬಂದಂತೆ ತೆರಿಗೆ ಹಾಕಿ 70 ರೂ.ಗೆ ಮಾರಾಟ ಮಾಡುತ್ತಿದೆ. ಈ ಹಣದಲ್ಲಿ ಹಾಲು, ಅನ್ನ ಯೋಜನೆ ಜಾರಿಗೆ ತಂದಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯ ಸರಕಾರ 1.28 ಲಕ್ಷ ಕೋಟಿ ರೂ.ಸಾಲ ಮಾಡಿದೆ ಎಂದು ಕುಮಾರಸ್ವಾಮಿ ದೂರಿದರು.

ಪಕ್ಷ ಬಿಟ್ಟು ಹೋಗುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷದಿಂದ ಅಲ್ಪಸ್ವಲ್ಪ ಅನುಕೂಲ ಪಡೆದವರು ಪಕ್ಷಕ್ಕೆ ನಿಯತ್ತಾಗಿರಬೇಕು. ಪಕ್ಷಕ್ಕೆ ಹಾನಿ ಮಾಡಿ ಹೋಗುವವರು ಬೇಕಾಗಿಲ್ಲ. ‘ಡಬಲ್ ಗೇಮ್’ ರಾಜಕಾರಣ ಮಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಅವರು ಹೇಳಿದರು.

ತಮ್ಮ ಅಧಿಕಾರಾವಧಿಯಲ್ಲಿ ಸೀರೆ, ಸೈಕಲ್ ಕೊಟ್ಟಿದ್ದನ್ನು ಯಡಿಯೂರಪ್ಪ ಹೇಳಿಕೊಂಡು ಓಡಾಡುತ್ತಿರುವುದನ್ನು, ಸಿದ್ದರಾಮಯ್ಯ ತಮಾಷೆಯಾಗಿ ತೋರಿಸುತ್ತಾರೆ. ಆದರೆ, ಈಗ ಅವರು ಮಾಡುತ್ತಿರುವುದು ಇದನ್ನೆ. ಅನ್ನ-ಹಾಲು ಎಂದು ಪದೇ ಪದೇ ಹೇಳಿಕೊಂಡು ಕುಣಿದಾಡುತ್ತಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಶಾಸಕರೆ ಇಲ್ಲದ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಖ್ಯಮಂತ್ರಿ ಘೋಷಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯ ಕಾರ್ಯಕ್ರಮಕ್ಕೆ ಸರಕಾರದ ವತಿಯಿಂದ ಟೆಂಡರ್ ಕರೆದಿರೋ ಸಂಪ್ರದಾಯ ಇದೇ ಮೊದಲು. ರಾಜ್ಯದ ಜನತೆಯ ತೆರಿಗೆ ಹಣವನ್ನು ಕಾರ್ಯಕ್ರಮದ ಹೆಸರಿನಲ್ಲಿ ಪೋಲು ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ವರ್ಷಕ್ಕೆ ಐನೂರು ಕೋಟಿ ರೂ.ಜಾಹೀರಾತುಗಳಿಗೆ ಖರ್ಚು ಮಾಡಲಾಗುತ್ತಿದೆ. ಈ ರೀತಿ ಜಾಹೀರಾತಿಗೆ ಹಣ ಖರ್ಚು ಮಾಡುವ ಅವಶ್ಯಕತೆ ಇದೆಯಾ? ಜಾಹೀರಾತುಗಳನ್ನು ನೀಡಿ ಪತ್ರಿಕೆಗಳನ್ನು ಉಳಿಸುವ ಕೆಲಸವನ್ನು ಮಾಡುತ್ತಿದ್ದಾರಾ? ಇವತ್ತಿನ ದಿನ ಪತ್ರಿಕೆಗಳನ್ನು ನಡೆಸಲು ಕಷ್ಟವಿದೆ. ಆದುದರಿಂದ, ಅವರನ್ನು ಉಳಿಸುತ್ತಿರಬಹುದು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News